ಜಿಲ್ಲೆ

ಹಿತಾಸಕ್ತಿ ಬದಿಗೊತ್ತಿ ಕರೊನಾ ಸೇನಾನಿಗಳ ಕೆಲಸ

Shivamogga

ಸೊರಬ: ಮಾನವೀಯ ಗುಣಗಳು ಕಣ್ಮರೆಯಾಗುತ್ತಿರುವ ಕಾಲದಲ್ಲಿ ಕುಟುಂಬ ಮತ್ತು ವೈಯಕ್ತಿಕ ಹಿತಾಸಕ್ತಿ ಬದಿಗೊತ್ತಿ ಸಮಾಜದ ಪ್ರತಿಯೊಬ್ಬರ ರಕ್ಷಣೆಗೆ ಹಗಲಿರುಳು ಶ್ರಮಿಸುತ್ತಿರುವ ಕರೊನಾ ಸೇನಾನಿಗಳ ಸೇವೆ ಶ್ಲಾಘನೀಯ ಎಂದು ಖ್ಯಾತ ಸಾಹಿತಿ ಡಾ. ನಾ.ಡಿಸೋಜ ಹೇಳಿದರು.

ಪಟ್ಟಣದ ಹಳೇ ಸೊರಬ ಅಮರಜ್ಯೋತಿ ಸಂಯುಕ್ತ ಪಪೂ ಕಾಲೇಜಿನಲ್ಲಿ ಶನಿವಾರ ಕರೊನಾ ಸೇನಾನಿಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಡ ರೋಗಿಗಳ ಸೇವೆ ಅತ್ಯಮೂಲ್ಯ ಎಂದರು.

ಕರೊನಾ ಸೇನಾನಿಗಳು ತಮ್ಮ ಜೀವದ ಹಂಗು ತೊರೆದು ವೃತ್ತಿ ಜತೆಗೆ ಮಾನವೀಯತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಪರಿಣಾಮ ಕರೊನಾ ನಿಯಂತ್ರಣದಲ್ಲಿದೆ. ಇಂತಹ ಸಂಕಷ್ಟದಲ್ಲಿ ಕರೊನಾ ಸೇನಾನಿಗಳಿಲ್ಲದೆ ಇರುವ ಸಮಾಜ ಊಹಿಸಿಕೊಳ್ಳಲು ಅಸಾಧ್ಯ ಎಂದು ಹೇಳಿದರು.

ಕರೊನಾ ಸೇನಾನಿಗಳಾಗಿ ಸೇವೆ ಸಲ್ಲಿಸಿದ ಆಶಾ ಕಾರ್ಯಕರ್ತೆರು, ಪತ್ರಕರ್ತರು, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ತಾಲೂಕು ಕಚೇರಿ ಅಧಿಕಾರಿ ಹಾಗೂ ಸಿಬ್ಬಂದಿಗೆ ಸನ್ಮಾನಿಸಲಾಯಿತು. ಮಂಗಳೂರು ಉಪವಿಭಾಗಾಧಿಕಾರಿ ದೇವರಾಜ್ ಚಿಮಣೂರು, ಪಿಎಸ್​ಐ ಟಿ.ಬಿ.ಪ್ರಶಾಂತ್ ಕುಮಾರ್, ವಕೀಲ ವೈ.ಜಿ.ಪುಟ್ಟಸ್ವಾಮಿ ಮಾತನಾಡಿದರು.

ಬಿಎಸ್​ಎನ್​ಎಲ್ ನಿವೃತ್ತ ಅಧಿಕಾರಿ ವೇಣುಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಶಿವಾನಂದ್ ರಾಣೆ, ಟಿಎಚ್​ಒ ಅಕ್ಷತಾ ವಿ.ಖಾನಾಪುರ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅರುಂಧತಿ ಕಾಳೆ, ಕಾಲೇಜಿನ ಸಂಚಾಲಕಿ ಸಿಸ್ಟರ್ ಹಿಲ್ಡಾಗಾರ್ಡ್, ಪಿಆರ್​ಒ ಮಂಜಪ್ಪ, ರಾಗಿಣಿ ವೇಣುಗೋಪಾಲ್, ಡಾ. ಎಂ.ಕೆ.ಭಟ್, ಜಿ.ಡಿ.ನಾಯ್್ಕ ಆರ್.ಬಿ.ಚಂದ್ರಪ್ಪ ಇದ್ದರು. ಪೂರ್ಣಿಮಾ ಭಾವೆ ಪ್ರಾರ್ಥಿಸಿದರು. ಎನ್.ಕೆ.ಲಿಂಗೇಶ್ ಸ್ವಾಗತಿಸಿದರು. ಸುಬ್ರಾಯ ಹಳ್ಳೇರ್ ವಂದಿಸಿದರು. ಎಸ್.ಎಂ.ನೀಲೇಶ್, ಪ್ರಜ್ವಲ್ ಚಂದ್ರಗುತ್ತಿ ನಿರೂಪಿಸಿದರು.