ವಿಜಯಪುರ : ತಾಲೂಕಿನ ಹಿಟ್ಟಿನಹಳ್ಳಿ ಗ್ರಾಮದಲ್ಲಿ ಮೇ 3 ರಂದು ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಕಂಚಿನ ಪ್ರತಿಮೆಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ.
ಅಂದು ಬೆಳಗ್ಗೆ 8ಕ್ಕೆ ವಿವಿಧ ವಾದ್ಯಗಳೊಂದಿಗೆ ಗ್ರಾಮದ ಮಾರುತೇಶ್ವರ ದೇವಸ್ಥಾನದಿಂದ ಕುಂಭಮೇಳ ಹಾಗೂ ಶಿವಾಜಿ ಮಹಾರಾಜರ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಭಾವಚಿತ್ರದ ಮೆರವಣಿಗೆಯು ಅಲ್ಲಿನ ಪ್ರಮುಖ ಬೀದಿಗಳಲ್ಲಿ ಸಂಭ್ರಮದಿಂದ ಜರುಗಲಿದೆ. ಬೆಳಗ್ಗೆ 10.30ಕ್ಕೆ ಉಭಯ ಮಹನೀಯರ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮ ನಡೆಯಲಿದ್ದು, ತಿಂಥಣಿ ಕನಕ ಗುರುಪೀಠ ಶಾಖಾ ಮಠದ ಸಿದ್ಧರಮಾನಂದ ಸ್ವಾಮೀಜಿ, ಬಾಗಲಕೋಟೆ& ಹಿಟ್ಟಿನಹಳ್ಳಿ ಚರಂತಿಮಠದ ಪ್ರಭು ಸ್ವಾಮೀಜಿ ಹಾಗೂ ಕಿರಣ ಜೋಶಿ (ರಾಮಭಟ್ಟ) ಸಾನ್ನಿಧ್ಯ ವಹಿಸಲಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸುವರು.
ಮಧ್ಯಾಹ್ನ 12.30ಕ್ಕೆ ಮಹಾಪ್ರಸಾದ ವಿತರಣೆ, ರಾತ್ರಿ 10ಕ್ಕೆ ಶಿವಾಜಿ ಮಹಾರಾಜರ, ವೀರರಾಣಿ ಕಿತ್ತೂರ ಚನ್ನಮ್ಮಳ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಕುರಿತ ಕಿರುನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದು ಪ್ರಕಟಣೆಯು ತಿಳಿಸಿದೆ.