ವಿಜಯಪುರ: ನರೇಗಾ ಯೋಜನೆಯಡಿಯಲ್ಲಿ ಒಂದು ದಿನದ ಶ್ರಮದಾನ ಕಾರ್ಯಕ್ರಮವನ್ನು ವಿಜಯಪುರ ತಾಲೂಕಿನ ಹಿಟ್ಟಿನಹಳ್ಳಿಯಲ್ಲಿ ನಡೆಸಲಾಯಿತು. ನರೇಗಾ ಯೋಜನೆಯು ನಮ್ಮ ಜಿಲ್ಲೆಯಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರೆ ಅದಕ್ಕೆ ಎಲ್ಲ ಸಿಬ್ಬಂದಿಗಳ ಸೂಕ್ತ ಸಮಯದಲ್ಲಿ ಕಾರ್ಯನಿರ್ವಹಣೆಯೇ ಕಾರಣವಾಗಿದೆ ಹೀಗಾಗಿ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋವಿಂದರೆಡ್ಡಿ ಹೇಳಿದರು. ಮಹಾತ್ಮಾ ಗಾಂಧಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘ(ರಿ) ವಿಜಯಪುರ ಹಾಗೂ ಹಿಟ್ಟಿನಹಳ್ಳಿ ಗ್ರಾಮ ಪಂಚಾಯತಿ ಸಹಯೋಗದೊಂದಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನರೇಗೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿಜಯಪುರ ಜಿಲ್ಲೆಯಲ್ಲಿ ನರೇಗಾ ಕೂಲಿಕಾರ್ಮಿಕರ 50 ಲಕ್ಷ ಮಾನವದಿನಗಳನ್ನು ಮುಗಿಸಿದೆ. ಈ ಶ್ರೇಯಸ್ಸು ಮತ್ತು ಯಶಸ್ಸು ಗ್ರಾಮ ಪಂಚಾಯತಿಯ ಕೆಳಹಂತದ ಸಿಬ್ಬಂದಿಗಳಿಂದ ಹಿಡಿದು ಎಲ್ಲರಿಗೂ ಸಲ್ಲುತ್ತದೆ. ಕೋವಿಡ್ ಸಮಯದಲ್ಲಿ ಪ್ರತಿ ಗ್ರಾಮದಲ್ಲೂ ವಲಸೆ ಕಾರ್ಮಿಕರು ಮತ್ತು ಮನೆಯಲ್ಲಯೇ ಕುಳಿತು ಕಾರ್ಮಿಕರಿಗೇ ಉದ್ಯೋಗ ಕೊಟ್ಟು ನರೇಗಾ ನೆರವಾಗುವ ಮೂಲಕ ಅವರ ಜೀವನೋಪಾಯಕ್ಕೆ ಆಸರೆ ಆಗಿದೆ. ಕಳೆದ ವರ್ಷಗಿಂತ ಈ ವರ್ಷ ನರೇಗಾ ಯೋಜನೆಯ ಕಾರ್ಯವೈಖರಿ ವೇಗ ಮತ್ತು ಪಾರದರ್ಶಕವಾಗಿ ಮುನ್ನಡೆದಿದೆ. ಆಡಳಿತಾತ್ಮಕವಾಗಿ ಹೊಸ ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡಿರುವುದು ಕೂಡಾ ಇದಕ್ಕೆ ಕಾರಣವಾಗಿದೆ ಎಂದರು. ಜಿಲ್ಲೆಯಲ್ಲಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘ(ರಿ) ಸಂಘಟನೆಯಾಗಿದ್ದು ಅವರಲ್ಲಿ ಉತ್ತಮ ಬಾಂಧವ್ಯ ಬೆಳೆಯುವಂತಾಗಿದೆ. ಕೆಲಸದ ಚರ್ಚೆ, ಸವಾಲಾಗಿರುವ ಸಂಗತಿಗಳನ್ನು ಪರಿಹರಿಸಿಕೊಳ್ಳುವಲ್ಲಿ ಇದು ಅವರಿಗೆ ಸಹಕಾರಿ ಆಗಲಿದೆ. ನರೇಗಾ ಯೋಜನೆಯ ಅನೇಕ ಕಾಮಗಾರಿಗಳಲ್ಲಿ ಭಾಗವಹಿಸುವ ಕೂಲಿ ಕಾರ್ಮಿಕರ ಹಾಜರಾತಿಯನ್ನು ಎನ್.ಎಂ.ಎ.ಎಸ್. ಆ್ಯಪ್ ಮೂಲಕ ಆನ್‌ಲೈನ ಹಾಜರಾತಿ ಮತ್ತು ಭಿತ್ತಿ ಚಿತ್ರವನ್ನು ಪ್ರದರ್ಶನ ಮೇಳ, ಬೀದಿ ನಾಟಕ ಮಾಡಲಾಗಿದೆ. ಶಾಲೆಯ ಗೋಡೆಗಳ ಮೇಲೆ ಅತ್ಯುತ್ತಮವಾದ ಸಾಮಾಜಿಕ ಸಂದೇಶಗಳನ್ನು ಬಿಡಿಸಲಾಗಿದೆ, ಮನೆ ಮನೆ ಭೇಟಿ ನೀಡಿ ನರೇಗಾ ಕರಪತ್ರ ವಿತರಣೆ ಮಾಡಿ, ಮಾಹಿತಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಸಹಾಯಕ ಯೋಜನಾಧಿಕಾರಿ ಅರುಣಕುಮಾರ ದಳವಾಯಿ, ನರೇಗಾ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಪೃಥ್ವಿರಾಜ ಪಾಟೀಲ, ಗ್ರಾಮ ಪಂಚಾಯತಿ ಅಧ್ಯಕ್ಷೆ ರತ್ನಾಬಾಯಿ ಬಿರಾದಾರ, ಜಿಲ್ಲೆಯ ಎಲ್ಲ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು, ನರೇಗಾ ಸಹಾಯಕ ನಿರ್ದೇಶಕರು, ತಾಂತ್ರಿಕ ಸಂಯೋಜಕರು, ತಾಲೂಕಾ ಐಇಸಿ ಸಂಯೋಜಕರು, ತಾಲೂಕಾ ಎಂ.ಐ.ಎಸ್. ಸಂಯೋಜಕರು, ತಾಂತ್ರಿಕ ಸಹಾಯಕರು ಸೇರಿದಂತೆ ಜಿಲ್ಲೆಯ ಎಲ್ಲ ನರೇಗಾ ಸಿಬ್ಬಂದಿಗಳು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಉಪಾಧ್ಯಕ್ಷ ಹಾಗೂ ಸದಸ್ಯರು, ಮಹಿಳಾ ಸ್ವಸಹಾಯ ಸಂಘದ ಪದಾಧಿಕಾರಿಗಳು ಹಾಜರಿದ್ದರು. ನರೇಗಾ ಕ್ಷೆಮಾಭಿವೃದ್ಧಿಯ ಕಾರ್ಯದರ್ಶಿ ಪರಮೇಶ ಮಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಐಇಸಿ ಸಂಯೋಜಕ ಸಂತೋಷ ಛಲವಾದಿ ಸ್ವಾಗತಿಸಿದರು. ಐಇಸಿ ಸಂಯೋಜಕ ಪರಮೇಶ ಹೊಸಮನಿ ವಂದಿಸಿದರು. ಐಇಸಿ ಸಂಯೋಜಕರು ಪ್ರಾರ್ಥಿಸಿದರು. ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ ನಿರೂಪಿಸಿದರು.