ಮುದಗಲ್: ಪಟ್ಟಣದ ಹೊರ ವಲಯದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಲು ಬಳಸುತ್ತಿದ್ದ ಯಂತ್ರೋಪಕರಣಗಳು ಹಾಗೂ 19 ಕಲ್ಲು ದಿಮ್ಮಿಗಳನ್ನು ಮಂಗಳವಾರ ಜಪ್ತಿ ಮಾಡಿದ್ದಾರೆ.
ರಾಯಚೂರಿನ ಗಣಿ ಮತ್ತು ಭೂ ವಿಜ್ಞಾನಿ ಅಧಿಕಾರಿ ಮಹೇಶ ಈ ಕುರಿತು ಮಾಹಿತಿ ನೀಡಿ, ಗಣಿ ಮಾಲೀಕ ಚಂದಮ್ಮ ರಾಠೋಡ್ ಅವರ ಸರ್ವೇ ನಂ. 40/1 ರ 2 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ನಿರ್ವಹಿಸಲು ಕಳೆದ ಕೆಲ ವರ್ಷಗಳ ಹಿಂದೆ ಇಲಾಖೆಯಿಂದ ಪರವಾನಗಿ ಪಡೆದಿದ್ದರು. ಪರವಾನಗಿ ಅವಧಿ ಮುಗಿದ ಬಳಿಕ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ. ಈ ಸಂದರ್ಭದಲ್ಲಿ 2 ಕಂಪ್ರೆಶರ್, ಹಿಟಾಚಿ ಮತ್ತು 19 ಬೃಹದಾಕಾರದ ಕಲ್ಲು ದಿಮ್ಮಿಗಳನ್ನು ಜಪ್ತಿ ಮಾಡಲಾಗಿದೆ. ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ತಿಳಿಸಿದ್ದಾರೆ.