ವಿಜಯಪುರ: ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸದಂತೆ ಹೈಕೋರ್ಟ್ ತೀರ್ಪು ನೀಡಿದ್ದರೂ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಗುರುವಾರ ಹಿಜಾಬ್ ಧರಿಸಿಕೊಂಡು ಕಾಲೇಜಿಗೆ ಬಂದ ವಿದ್ಯಾರ್ಥಿನಿಯರ ಪ್ರವೇಶ ನಿರಾಕರಿಸಿದ್ದರಿಂದ ಕಾಲೇಜಿನ ಮುಂಭಾಗದಲ್ಲೇ ಕುಳಿತು ಕೆಲ ವಿದ್ಯಾರ್ಥಿನಿಯರು ಪ್ರತಿಭಟಿಸಿದರೆ, ಕೆಲ ವಿದ್ಯಾರ್ಥಿನಿಯರು ವಾಪಸ್ ತೆರಳಿದರು.
ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶಕ್ಕೆ ಅವಕಾಶ ನೀಡಲಿಲ್ಲ. ಈ ವೇಳೆ ವಿದ್ಯಾರ್ಥಿನಿಯರು ಕಾಲೇಜಿನ ಮುಂದೆ ಪ್ರತಿಭಟಿಸಿದರು.
ಸ್ಥಳಕ್ಕೆ ಬಂದ ತಹಸೀಲ್ದಾರ್ ಶಿವರಾಜ್, ಹೈಕೋರ್ಟ್ ಆದೇಶ ಧಿಕ್ಕರಿಸಬಾರದು. ಆದೇಶ ಉಲ್ಲಂಘಿಸಿದರೆ ಕ್ರಮಕೈಗೊಳ್ಳಬೇಕಾಗುತ್ತದೆ. ನಾವು ಭಾರತೀಯರು ಎನ್ನುವ ಹೆಮ್ಮೆಯಿದ್ದರೆ ಹಿಜಾಬ್ ತೆರೆದಿಟ್ಟು ತರಗತಿಗೆ ಹೋಗುವ ಮೂಲಕ ನ್ಯಾಯಾಲಯದ ಆದೇಶ ಗೌರವಿಸಿ ಎಂದು ಮನವೊಲಿಸಿದರು.
ಪ್ರಾಂಶುಪಾಲ ಶಶಿಕುಮಾರ್ ಮಾತನಾಡಿ, ಮಕ್ಕಳ ಭವಿಷ್ಯದ ಜತೆಗೆ ನ್ಯಾಯಾಲಯದ ಆದೇಶ ಪಾಲಿಸಬೇಕಿರುವುದು ನಮ್ಮ ಕರ್ತವ್ಯ. ಪೂರ್ವ ಸಿದ್ಧತಾ ಪರೀಕ್ಷೆ ನಡೆಯುತ್ತಿದೆ. ಅದಕ್ಕೆ ತೊಂದರೆ ಮಾಡಿಕೊಳ್ಳಬೇಡಿ. ಕೋರ್ಟ್ ಆದೇಶ ಮೀರಿ ಬರುವವರಿಗೆ ಒಳಗೆ ಪ್ರವೇಶ ನೀಡುವುದಿಲ್ಲ ಎಂದು ಮನವರಿಕೆ ಮಾಡಿದರು. ಪರೀಕ್ಷೆಗೆ ತಡವಾಗಿದೆ. ಆದರೂ ಹಿಜಾಬ್ ತೆರೆದಿಟ್ಟು ಹೋಗಿ ಪರೀಕ್ಷೆ ಬರೆಯಿರಿ ಎಂದು ತಿಳಿಸಿದರು.
21 ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರು ಹಿಜಾಬ್ ತೆಗೆಯಲು ಸಮ್ಮತಿಸಿದರೆ, ಪ್ರಥಮ ವರ್ಷದ 16 ಮಂದಿ ವಿದ್ಯಾರ್ಥಿನಿಯರು ಹಿಜಾಬ್ ತೆಗೆಯುವುದಿಲ್ಲ ಎಂದು ವಾಪಸ್ ಹೋದರು.
ಸರ್ಕಲ್ ಇನ್‌ಸ್ಪೆಕ್ಟರ್ ಬಸವನಗೌಡ ಕೆ.ಪಾಟೀಲ್, ಸಬ್ ಇನ್‌ಸ್ಪೆಕ್ಟರ್ ನಂದೀಶ್ ಇತರರು ಹಾಜರಿದ್ದರು.