ಶಿವಮೊಗ್ಗ: ಜಿಲ್ಲೆಯಲ್ಲಿ ಹಿಜಾಬ್ ಮತ್ತೊಂದು ರೂಪದಲ್ಲಿ ಸದ್ದು ಮಾಡುತ್ತಿದೆ. ಶಿವಮೊಗ್ಗದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದರಲ್ಲಿ ಮೂವರು ಉಪನ್ಯಾಸಕಿಯರಿಗೆ ಹಿಜಾಬ್ ತೆಗೆದಿರಿಸಿ ಪಾಠ ಮಾಡುವಂತೆ ಪ್ರಾಚಾರ್ಯರು ಸೂಚನೆ ನೀಡಿದ್ದರು. ಆರಂಭದ ಕೆಲದಿನ ಅದನ್ನು ಪಾಲಿಸಿದ ಉಪನ್ಯಾಸಕಿಯರು ಕ್ರಮೇಣ ವರಸೆ ಬದಲಿಸಿದ್ದಾರೆ.
ನಮಗೆ ಹಿಜಾಬ್ ಧರಸಿ ಪಾಠ ಮಾಡಲು ಅವಕಾಶ ನೀಡಿ. ಇಲ್ಲವೇ ಹೈಕೋರ್ಟ್ನ ಅಂತಿಮ ತೀರ್ಪು ಬರುವವರೆಗೂ ರಜೆ ನೀಡಿ ಎಂದು ಪಟ್ಟು ಹಿಡಿದಿದ್ದಾರೆ. ವಾದಕ್ಕೆ ಬೆಂಬಲವಾಗಿ ಹೈಕೋರ್ಟ್ನ ಮಧ್ಯಂತರ ಆದೇಶ ಕುರಿತು ಕೆಲ ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿ ತುಣುಕುಗಳನ್ನು ಪ್ರಾಚಾರ್ಯರಿಗೆ ವ್ಯಾಟ್ಸ್ಆಪ್ ಮೂಲಕ ಕಳುಹಿಸಿದ ಉಪನ್ಯಾಸಕಿಯರು, ಹಿಜಾಬ್ ಕುರಿತ ಮಧ್ಯಂತರ ಆದೇಶ ವಿದ್ಯಾರ್ಥಿಗಳಿಗೆ ಮಾತ್ರ ಉಪನ್ಯಾಸಕಿಯರಿಗೆ ಇದು ಅನ್ವಯವಾಗುವುದಿಲ್ಲ ಎಂದು ಹೇಳಿದ್ದಾರೆ. ಗೊಂದಲಗಳ ಬಳಿಕ ದಾರಿ ಕಾಣದೇ ಪ್ರಾಚಾರ್ಯರು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರಿಗೆ ಪತ್ರ ಬರೆದು ಸೂಕ್ತ ಮಾರ್ಗದರ್ಶನ ಮಾಡುವಂತೆ ಕೋರಿದ್ದಾರೆ.