ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮುಸ್ಲಿಮರು ಪ್ರತಿಭಟಿಸಿದರು. ತಮನ್ನಾ ಸನದಿ, ಶಮೀನಾ ಅನ್ಸಾರಿ, ಶಬಾನಾ ಚೋಪದಾರ, ಕಲಂದರಸಾಬ್ ದೊಡ್ಡಮನಿ, ರಾಜೇಸಾಬ ಪಠಾಣ, ನಗೀನಾ ನದಾಫ್, ಶಾಹೀನ್ ಶೇಖ್, ಫಾತಿಮಾ ಮುಲ್ಲಾ ಇತರರು ಇದ್ದರು. 
ಜಿಲ್ಲೆ

ಹಿಜಾಬ್ ಧರಿಸಲು ಅವಕಾಶ ನೀಡಿ

ಬೆಳಗಾವಿ: ಶಾಲಾ-ಕಾಲೇಜ್‌ಗಳಲ್ಲಿ ಕಡ್ಡಾಯವಾಗಿ ಶಾಲಾ ಸಮವಸ್ತ್ರ ಸಂಹಿತೆ ಪಾಲಿಸಬೇಕು ಎಂಬ ಸರ್ಕಾರದ ಆದೇಶ ಖಂಡಿಸಿ ಹಾಗೂ ವಿಧ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಮುಸ್ಲಿಮರು ಅಖಿಲ ಭಾರತ ಮಜಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಸಂಘಟನೆ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಸೋಮವಾರ ಮನವಿ ಸಲ್ಲಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾವಣೆಗೊಂಡ ನೂರಾರು ಮುಸ್ಲಿಮರು, ಆರ್‌ಎಸ್‌ಎಸ್ ಸಂಘಟನೆ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.
ರಾಜಕೀಯ ಮಾಡಬೇಡಿ: ಹಿಜಾಬ್ ಧರಿಸುವುದು ನಮ್ಮ ಮೂಲಭೂತ ಹಕ್ಕು. ಆದರೆ, ಶಾಲಾ-ಕಾಲೇಜ್‌ಗಳಲ್ಲಿ ಅದನ್ನು ನಿಷೇಧಿಸಬೇಕು ಎನ್ನುವ ಬೆಳವಣಿಗೆ ನಡೆಯುತ್ತಿದೆ. ಹಿಜಾಬ್ ಧರಿಸುವ ವಿದ್ಯಾರ್ಥಿನಿಯರನ್ನು ತರಗತಿಗಳಿಂದ ರಾಜಕೀಯ ಕಾರಣಕ್ಕೆ ಹೊರಹಾಕಲಾಗುತ್ತಿದೆ. ಸರ್ಕಾರದ ಈ ನಡೆ ಸಮಂಜಸವಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ದೇಶ ಬಿಡಲಾರೆವು: ಸಮಾಜಕ್ಕೆ ಹಿಜಾಬ್ ಉತ್ತಮ ಸಂದೇಶ ರವಾನಿಸುತ್ತದೆ. ಹೀಗಾಗಿ, ನಮ್ಮ ಮಕ್ಕಳು ಹಿಜಾಬ್ ಧರಿಸಿಕೊಂಡೇ ಶಾಲೆ-ಕಾಲೇಜ್‌ಗಳಿಗೆ ಹಾಜರಾಗುತ್ತಾರೆ.
ಅವರಿಗೆ ಸರ್ಕಾರ ಅವಕಾಶ ನೀಡಬೇಕು. ರಾಜಕೀಯದ ಲಾಭಕ್ಕಾಗಿ ಶಾಲಾ-ಕಾಲೇಜ್‌ಗಳಲ್ಲಿ ಮತೀಯ ಗಲಭೆಗಳಿಗೆ ಪ್ರೇರಣೆ ನೀಡುವುದು ಖಂಡನೀಯ. ನಾವೂ ಭಾರತ ಮಾತೆಯ ಮಕ್ಕಳು. ಪಾಕಿಸ್ತಾನಕ್ಕೆ ಹೋಗಲಾರೆವು, ಭಾರತ ಬಿಡಲಾರೆವು ಎಂದು ಘೋಷಣೆ ಕೂಗುವ ಮೂಲಕ ಹಿಜಾಬ್‌ಗೆ ಅವಕಾಶ ನೀಡುವಂತೆ ಒತ್ತಾಯಿಸಿದರು.

ನಗೀನಾ ನದಾಫ್, ಶಾಹೀನ್ ಶೇಖ್, ತಮನ್ನಾ ಸನದಿ, ಶಮೀನಾ ಅನ್ಸಾರಿ, ಶಬಾನಾ ಚೋಪದಾರ, ಫಾತಿಮಾ ಮುಲ್ಲಾ, ಕಲಂದರಸಾಬ್ ದೊಡ್ಡಮನಿ, ರಾಜೇಸಾಬ ಪಠಾಣ, ಮೌಲಾನಾ ಸಲೀಂ, ಮೌಲಾನಾ ಆರೀಫ್, ಕಾಸೀಂ, ಆಜಾದ್ ಮುಲ್ಲಾ, ಇಮ್ರಾನ್ ಪೀರಜಾದೆ, ಲತೀಫ್ ಪಠಾಣ, ಫಜಲ್ ಪಠಾಣ ಇತರರಿದ್ದರು.