ಬೀದರ್: ಹಲವೆಡೆ ಹಿಂದೂ ದೇವಾಲಯಗಳನ್ನು ಒತ್ತುವರಿ ಮಾಡಿಕೊಳ್ಳುತ್ತಿರುವ ಘಟನೆ ನಡೆಯುತ್ತಿವೆ. ಈ ಬಗ್ಗೆ ಕಾರ್ಯಕರ್ತರು ಅಭಿಯಾನ ರೀತಿ ಕೆಲಸ ಮಾಡಿ ದೇವಾಲಯಗಳನ್ನು ಸಂರಕ್ಷಣೆ ಮಾಡಬೇಕೆಂದು ಶ್ರೀರಾಮ ಸೇನೆ ಪ್ರಧಾನ ಕಾರ್ಯದರ್ಶಿ ಮಹಾಲಿಂಗಣ್ಣ ಗುಂಜಗಾವಿ ಕರೆ ನೀಡಿದರು.
ನಗರದಲ್ಲಿ ಭಾನುವಾರ ಆಯೋಜಿಸಿದ ಶ್ರೀರಾಮ ಸೇನೆ ಜಿಲ್ಲಾ ಬೈಠಕ್ ಉದ್ಘಾಟಿಸಿ ಮಾತನಾಡಿ, ಕೆಲವರು ದೇವಾಲಯಗಳಿಗೆ ಗುರಿ ಮಾಡಿಕೊಂಡು ಒತ್ತುವರಿ ಮಾಡುತ್ತಿರುವ ಘಟನೆ ನಡೆಯುತ್ತಿರುವುದು ಗಂಭೀರ ವಿಷಯ. ಈ ಬಗ್ಗೆ ಸೇನೆ ಪದಾಧಿಕಾರಿಗಳು ನಿಗಾ ವಹಿಸಬೇಕು. ಮುಂಬರುವ ಏಪ್ರಿಲ್ ಅಂತ್ಯದವರೆಗೆ ದೇವಾಲಯಗಳ ರಕ್ಷಣೆ ಸಂಬಂಧ ಜನಜಾಗೃತಿ ಅಭಿಯಾನ ನಡೆಸಬೇಕು ಎಂದು ಸಲಹೆ ನೀಡಿದರು.
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರಲಾಗಿದೆ. ಆದರೂ ಗೋಹತ್ಯೆ ನಡೆಯುತ್ತಿವೆ. ಇದರತ್ತ ಚಿತ್ತ ಹರಿಸಬೇಕು. ಎಲ್ಲಾದರೂ ಗೋಹತ್ಯೆ ನಡೆದರೆ ಪೊಲೀಸರ ಹಾಗೂ ಸೇನೆ ಪ್ರಮುಖರ ಗಮನಕ್ಕೆ ತರಬೇಕು. ಮತಾಂತರ ತಡೆ ಹಿಡಿಯುವ ನಿಟ್ಟಿನಲ್ಲಿ ಸಹ ಎಲ್ಲರೂ ಕಾರ್ಯೋನ್ಮುಖರಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸೇನೆ ಜಿಲ್ಲಾಧ್ಯಕ್ಷ ವೀರಶೆಟ್ಟಿ ಖ್ಯಾಮಾ ಮಾತನಾಡಿ, ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ನಿರಂತರವಾಗಿ ವಿವಿಧ ಚಟುವಟಿಕೆ ನಡೆಸಲಾಗುತ್ತಿದೆ. ಬರುವ ದಿನಗಳಲ್ಲಿ ಇನ್ನಷ್ಟು ಬಲಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪ್ರಮುಖರಾದ ಡಾ.ರಾಜಕುಮಾರ ಹೆಬ್ಬಾಳೆ, ಡಾ.ವಿಶ್ವನಾಥ ಉಪ್ಪೆ, ಕರುಣೇಶ್, ಶಂಕರ ಖ್ಯಾಮಾ, ಸತೀಶ್ ಪಾರಾ, ನಾಗು ಬಿಜಾಪುರ, ಅಜಯ ಮಂಡಲ, ವಿಶಾಲ ಪಾಟೀಲ್ ಚೊಂಡಿ, ಸೂರ್ಯಕಾಂತ ಯಾಬಾ, ಮಲ್ಲು ಜನವಾಡ, ಸಂತೋಷ ಮುದಾಳೆ, ಶಾಂತಕುಮಾರ ಅಲಿಯಂಬರ್, ಸುಮಿತ್ ಖ್ಯಾಮಾ, ಶಿವು ಮೂಲಗೆ, ಸಚಿನ್, ಅಂಬಾದಾಸ ಅಲಿಯಂಬರ್, ಗುಂಡುರಾವ ಬಿರಾದಾರ, ಅನೀಲ ಬುಯ್ಯಾ, ನವೀನ್ ಬುಯ್ಯಾ ಇತರರಿದ್ದರು.