ಬಾಗಲಕೋಟೆ ನಗರಸಭೆ ಸಭಾಭವನದಲ್ಲಿ ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷ ಬಸವರಾಜ ಅವರಾದಿ, ಸಭಾಪತಿ ಅಂಬಾಜಿ ಜೋಶಿ ಜೊತೆಗೆ ಕಾಂಗ್ರೆಸ್ ಸದಸ್ಯ ಹಾಜಿಸಾಬ ದಂಡಿನ ಜೊತೆ ಜಟಾಪಟಿ.  
ಜಿಲ್ಲೆ

ಹಿಂದುಸ್ತಾನ-ಪಾಕಿಸ್ತಾನ ಪ್ರತಿಧ್ವನಿ..!

ಬಾಗಲಕೋಟೆ: ಅಭಿವೃದ್ಧಿ, ಕಾಮಗಾರಿ ಮಂಜೂರು ಮಾಡುವ ವಿಚಾರದಲ್ಲಿ ಪರಸ್ಪರ ಮಾತಿನ ಲಹರಿ ಬದಲಾದ ಪರಿಣಾಮ ಹಿಂದುಸ್ತಾನ-ಪಾಕಿಸ್ತಾನ ಎಳೆದು ತಂದ ಪರಿಣಾಮ ಸಾಮಾನ್ಯ ಸಭೆ ರಣರಂಗವಾದ ಘಟನೆ ಇಲ್ಲಿನ ನಗರಸಭೆ ಸಭಾಭವನದಲ್ಲಿ ಮಂಗಳವಾರ ನಡೆಯಿತು.
ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಬಾಗಲಕೋಟೆ ನಗರ ವ್ಯಾಪ್ತಿಯಲ್ಲಿ ವಿವಿಧ ವಾರ್ಡಗಳಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯ, ಅನುದಾನ ಹಂಚಿಕೆ ಬಿಸಿಬಿಸಿಯಾಗಿ ಚರ್ಚೆ ನಡೆಯಿತು. ಈ ವೇಳೆ ಕಾಂಗ್ರೆಸ್ ಹಾಜಿಸಾಬ ದಂಡಿನ ನಮ್ಮ ವಾರ್ಡ್ ವ್ಯಾಪ್ತಿಗೆ ಬರುವ ಸೆಕ್ಟರ್ ೪೫, ವಾಂಬೆ ಕಾಲೋನಿ ಸೇರಿದಂತೆ ವಿವಿಧ ಕಾಮಗಾರಿ ನೀಡುತ್ತಿಲ್ಲ. ರಸ್ತೆ ಸುಧಾರಣೆ ಆಗಿಲ್ಲ. ಈ ಹಿಂದಿನ ಸಭೆಯಲ್ಲಿ ತಾವು ಸೂಚನೆ ನೀಡಿದರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ನಮ್ಮ ವಾರ್ಡ್‌ ಸಾರ್ವಜನಿಕರು ಟ್ಯಾಕ್ಸ ಕಟ್ಟುತ್ತಾರೆ ಅಂತ ಶಾಸಕ ವೀರಣ್ಣ ಚರಂತಿಮಠ ಎದುರು ದೂರಿದರು.
ನಾವು ಹಿಂದುಸ್ತಾನದವರು..
ಈ ವೇಳೆ ನಗರಸಭೆ ಉಪಾಧ್ಯಕ್ಷ ಬಸವರಾಜ ಅವರಾದಿ, ನಿಮ್ಮ ವಾರ್ಡ್ನಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ಆಗಿವೆ. ಅದರ ಪಟ್ಟಿ ನೀಡುತ್ತೇವೆ ಎನ್ನತ್ತಲೆ ನಿವೇನು ಪಾಕಿಸ್ತಾನ ಅದರೇನು ಅಂತ ತಿಳಿದಿರೇನು? ಅಂತ ಹೇಳಿದರು. ಇದರಿಂದ ಕೆರಳಿದ ಕೈ ಸದಸ್ಯ ಹಾಜಿಸಾಬ ದಂಡಿನ, ಅಭಿವೃದ್ಧಿ ವಿಚಾರದಲ್ಲಿ ಪಾಕಿಸ್ತಾನ ಯಾಕೇ ಎಳೆದು ತರುತ್ತೀರಿ? ಇದು ಹಿಂದುಸ್ತಾನ ಐತಿ. ನಮ್ಮ ಅಪ್ಪ, ತಾತ ಇಲ್ಲೆ ಹುಟ್ಟಿ ಬೆಳೆದಾರ. ಇದೆನೆಲ್ಲ ಬಿಟ್ಟು ಬಿಡಿ ಅಂತ ತೀವ್ರ ತರಾಟೆಗೆ ತಗೆದುಕೊಂಡರು. ಈ ವೇಳೆ ಹಾಜಿಸಾಬ ಪರ ಕೈ ಸದಸ್ಯರು, ಉಪಾಧ್ಯಕ್ಷರ ಪರ ಬಿಜೆಪಿ ಸದಸ್ಯರು ಧ್ವನಿಗೂಡಿಸಿದರು. ಪರಸ್ಪರ ಮಾತಿನ ಲಹರಿ ಜೋರಾಗಿ ನಡೆಯಿತು.
ಒಂದು ಹಂತಕ್ಕೆ ಪರಿಸ್ಥಿತಿ ಹತೋಟಿ ಮೀರುತ್ತಿದ್ದಂತೆ ಶಾಸಕ ವೀರಣ್ಣ ಚರಂತಿಮಠ ಗದರಿಸಿದರು. ಪಾಕಿಸ್ತಾನ ಶಬ್ಧ ತರವಲ್ಲ ಅಂತ ಉಪಾಧ್ಯಕ್ಷ ಬಸವರಾಜ ಅವರಾದಿ ಅವರಿಗೆ ಸೂಚನೆ ನೀಡಿದರು. ಮಾಧ್ಯಮಗಳಲ್ಲಿ ಹೈಲೆಟ್ ಆಗಬೇಕು ಅಂತ ಈ ರೀತಿ ಮಾಡುತ್ತೀ. ನಾನು ಅಧಿಕಾರಕ್ಕೆ ಬಂದಾಗಿನಿಂದ ನೋಡುತ್ತಿದ್ದೇನೆ ಪ್ರತಿ ಸಭೆಯಲ್ಲಿಯೂ ತಕರಾರು ವಾಡಿಕೆ ಮಾಡುಕೊಂಡಿದ್ದೀ. ಇದು ಸರಿಯಲ್ಲ. ನಿನ್ನ ನಡುವಳಿಕೆ ಬದಲಾಗಬೇಕು. ಇಲ್ಲವಾದಲ್ಲಿ ಸಭೆಯಿಂದ ಹೊರಗೆ ಹಾಕಬೇಕಾಗುತ್ತದೆ ಅಂತ ದಂಡಿನಗೆ ಎಚ್ಚರಿಕೆ ನೀಡಿದ ಅವರು, ಈಡೀ ಕ್ಷೇತ್ರವೇ ನನ್ನದು. ಎಲ್ಲವನ್ನು ಅಭಿವೃದ್ಧಿ ಮಾಡುತ್ತಿದ್ದೇವೆ. ಕೋಟ್ಯಂತರ ರೂ. ಅನುದಾನ ತರಲಾಗಿದೆ. ಸಹಕಾರ ನೀಡಬೇಕು. ಸಾಕು ಮಾಡಿ ಇಂತಹ ಚರ್ಚೆ ಅಂತ ಎಲ್ಲ ಸದಸ್ಯರಿಗೆ ಆವಾಜ್ ಹಾಕಿದರು. ಬಳಿಕ ಸಭೆ ಶಾಂತವಾಯಿತು.

ಸಭೆಯಲ್ಲಿ ವಾರ್ಡ್ ನಂಬರ್ ೧೭ ರಲ್ಲಿನ ಕೆರೂಡಿ ಆಸ್ಪತ್ರೆ ಸುತ್ತಮುತ್ತಲೀನ ಪ್ರದೇಶದ ರಸ್ತೆಗಳಿಗೆ ಶಿವ ಬಸವನಗರ ಅಂತ ನಾಮಕರಣ ಮಾಡಲು ಸಾರ್ವಜನಿಕರಿಂದ ಅರ್ಜಿ ಸಲ್ಲಿಕೆ ಬಗ್ಗೆ ಚರ್ಚೆ ನಡೆಸಿ ಕೊನೆಗೆ ನಾಮಕರಣ ಮಾಡಲು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಲಾಯಿತು. ಸಭೆಯಲ್ಲಿ ಸಭಾಪತಿ ಅಂಬಾಜಿ ಜೋಶಿ, ಆಯುಕ್ತ ಆರ್.ವಾಸಣ್ಣ, ಸದಸ್ಯರಾದ ರತ್ನಾ ಕೆರೂರ, ಶ್ರೀನಾಥ ಸಜ್ಜನ, ಚನ್ನವೀರ ಅಂಗಡಿ ಸೇರಿದಂತೆ ಇತರರು ಇದ್ದರು.

ಸಭೆಯಲ್ಲಿ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ನವನಗರದ ಯೂನಿಟ್-೩ಗೆ ೨೮೦೦ ಕೋಟಿ ರೂ. ಅನುದಾನ ಬಿಡುಗಡೆಯಾಗುತ್ತಿದೆ. ಉತ್ತಮ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ೮೫ ಕೋಟಿ ರೂ.ವೆಚ್ಚದಲ್ಲಿ ಇನ್ನೊಂದು ಆರ್‌ಒಬಿ ಮಾಡಲಾಗುವುದು. ಭಾರತ ಸರ್ಕಾರಕ್ಕೆ ಪಾವತಿ ಮಾಡಬೇಕಾದ ೧೮ ಕೋಟಿ ರೂ. ಪ್ರಸಕ್ತ ವರ್ಷ ವಿನಾಯಿತಿ ಪಡೆದು ನಗರಸಭೆಗೆ ಉಳಿಸಿಕೊಳ್ಳಲಾಗಿದ್ದು, ಕ್ರಿಯಾ ಯೋಜನೆಗೆ ರೂಪಿಸಿ ನಾನಾ ಅಭಿವೃದ್ಧಿ ಕಾಮಗಾರಿ ನಡೆಸಲು ಟೆಂಡರ್ ಕರೆಯಲಾಗುವುದು. ಅಮೃತ ನಗರೋತ್ಥಾನ ಯೋಜನೆ ಅಡಿಯಲ್ಲಿ ನಾನಾ ಕಾಮಗಾರಿಗಳು ಈಗಾಗಲೇ ಚಾಲನೆ ನೀಡಲಾಗಿದೆ ಎಂದು ಹೇಳಿದರು.

ಹೂ..ಅಂತಾರ ಮಾಡುತ್ತಿಲ್ಲ ಸಾಹೇಬ್ರ..

ಲಕ್ಷ್ಮಣ ಮುಚಖಂಡಿ ಮಾತನಾಡಿ, ಸಾಹೇಬ್ರ ನಮ್ಮ ವಾರ್ಡನ ಸ್ಟೇಶನ್ ಸಮೀಪದ ಪ್ರದೇಶದಲ್ಲಿ ರಸ್ತೆ, ಚರಂಡಿ ಮಾಡುತ್ತಿಲ್ಲ. ತಾವು ಇದ್ದಾಗ ಓಕೆ ಎನ್ನುತ್ತಾರೆ. ಮುಂದೆ ಯಾವ ಕೆಲಸ ಮಾಡುತ್ತಿಲ್ಲ. ಕುಂಟು ನೆಪ ಹೇಳುತ್ತಾರೆ ಅಂತ ಆರೋಪಿಸಿದರು. ಈ ವೇಳೆ ಅನೇಕ ಸದಸ್ಯರು ಧ್ವನಿ ಗೂಡಿಸಿ ತಮ್ಮ ವಾರ್ಡ್ನಲ್ಲಿ ಈ ಹಿಂದೆ ಮನವಿ ಮಾಡಿದ ಕೆಲಸ, ಕಾಮಗಾರಿ ಇದು ವರೆಗೆ ಮಾಡಿಲ್ಲ ಎಳೆ ಎಳೆಯಾಗಿ ಬಿಡಿಸಿಟ್ಟರು.