ಜಿಲ್ಲೆ

ಹಿಂದುಸ್ತಾನ ಒಗ್ಗೂಡಿಸಲು ಶ್ರಮಿಸಿದ ಶಿವಾಜಿ

ರೇಷ್ಮೆ ನಗರ ಡೆಸ್ಕ್

ರಾಮನಗರ  : ಸ್ವಾಭಿಮಾನಿ ರಾಷ್ಟ್ರನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರು ಹಿಂದು ಸ್ಥಾನವನ್ನು ಒಗ್ಗೂಡಿಸಲು ಬಹುವಾಗಿ ಶ್ರಮಿಸಿದರು ಎಂದು ಸಂಸದ ಡಾ. ಸಿ.ಎನ್. ಮಂಜುನಾಥ್ ತಿಳಿಸಿದರು.

ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್, ರಾಮನಗರ ಜಿಲ್ಲಾ ಕ್ಷತ್ರಿಯ ಮರಾಠ ಸೇವಾ ಟ್ರಸ್ಟ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜ ಮಹಾರಾಜರ 398ನೇ ಜಯಂತ್ಯುತ್ಸವ ಪ್ರಯುಕ್ತ ಜಿಲ್ಲಾ ಕ್ರೀಡಾಂಗಣ ಮೈದಾನದಿಂದ ಡಾ. ಬಿ.ಆರ್. ಅಂಬೇಡ್ಕರ್ ಭವನದವರೆಗೆ ನಡೆದ ಮೆರವಣಿಗೆಗೆ ಚಾಲನೆ ನೀಡಿ ಶಿವಾಜಿ ಮಹಾರಾಜರ ಜಯಂತಿ ಆಚರಣೆಗೆ ಶುಭಕೋರಿ ಮಾತನಾಡಿದರು.

ಭಾರತವು ಪ್ರಾಚೀನ ಕಾಲದಿಂದಲೂ ಸಾಕಷ್ಟು ಧೈರ್ಯಶಾಲಿ ಪುರುಷರ ಮತ್ತು ವೀರ ಆಡಳಿತಗಾರರ ಹಿನ್ನೆಲೆಯನ್ನು ಹೊಂದಿದೆ. ಭಾರತದಲ್ಲಿ ಅತ್ಯಂತ ಧೈರ್ಯಶಾಲಿ ಪುರುಷರು ಮಾತ್ರವಲ್ಲ, ಕೆಲವೊಂದು ಮಹಿಳೆಯರು ಆಡಳಿತ ನಡೆಸಿದ ಇತಿಹಾಸವಿದೆ. ಈ ಧೈರ್ಯಶಾಲಿ ಸಾಮ್ರಾಜ್ಯದ ಅಧಿಪತಿಗಳು ತಮ್ಮ ತಾಯಿನಾಡು ಮತ್ತು ಸ್ವರಾಜ್ಯವನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ತ್ಯಜಿಸಿದ್ದಾರೆ. ಅಂತಹ ಮಹಾನ್ ಧೈರ್ಯಶಾಲಿ ಯೋಧರಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಒಬ್ಬರು.

ಛತ್ರಪತಿ ಶಿವಾಜಿ ಮಹಾರಾಜರ ಹೆಸರು ಭಾರತದ ಚರಿತ್ರೆಯಲ್ಲಿ ಸೂರ್ಯ ಚಂದ್ರ ಇರೋವರೆಗೂ ಅಗ್ರಪಂಕ್ತಿಯಲ್ಲಿ ನಿಲ್ಲುವಂತದ್ದು ಎಂದು ಶಿವಾಜಿ ಮಹಾರಾಜರ ಬಗ್ಗೆ ತಿಳಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಜೆಡಿಎಸ್ ತಾಲೂಕು ಅಧ್ಯಕ್ಷ ಶಿವಲಿಂಗಯ್ಯ, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್‌ನ ರಾಮನಗರ ಜಿಲ್ಲಾಧ್ಯಕ್ಷ ಸೋಮಶೇಖರರಾವ್ ಕಾಂಬ್ಳೆ, ಪ್ರಧಾನ ಕಾರ್ಯದರ್ಶಿ ತುಕಾರಾಮ್ ಖಾಂಡೆ, ಖಜಾಂಚಿ ಬಾಬುರಾವ್ ಕಾಂಬ್ಳೆ, ರಾಮನಗರ ಜಿಲ್ಲಾ ಕ್ಷತ್ರಿಯ ಮರಾಠ ಸೇವಾ ಟ್ರಸ್ಟ್ ಅಧ್ಯಕ್ಷ ಎಲ್. ನಾರಾಯಣ ರಾವ್ ಚವ್ಹಾಣ್, ಕಾರ್ಯದರ್ಶಿ ಶ್ರೀನಿವಾಸರಾವ್ ನಲಿಗೆ, ಖಜಾಂಚಿ ಶಂಕರ್‌ರಾವ್ ಮುಂತಾದವರಿದ್ದರು.