ಜಿಲ್ಲೆ

ಹಿಂದುಳಿದವರಿಗಾಗಿ ಜಾತಿ ಜನಗಣತಿ

ಶೃಂಗೇರಿ: ಹಿಂದು ಧರ್ಮದಲ್ಲಿ ಅಧಿಕೃತವಾಗಿ 3800 ವಿವಿಧ ಜಾತಿಗಳಿವೆ. ಆದರೂ ಜಾತ್ಯತೀತ ದೇಶವಾಗಿದೆ. ಹಿಂದುಳಿದ ವರ್ಗದವರಿಗೆ ಸಮರ್ಪಕ ಸ್ಥಾನಮಾನ ನೀಡಲು ಜಾತಿ ಜನಗಣತಿ ಅಗತ್ಯವಾಗಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.

ಸೋಮವಾರ ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಮತ್ತು ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಭೆಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಮಾಡಿದ ಜಾತಿ ಜನಗಣತಿಯನ್ನು ಬಿಜೆಪಿ ವಿರೋಧಿಸಿತು. ಕೇಂದ್ರ ಸರ್ಕಾರ ಜಾತಿ ಜನಗಣತಿ ಮಾಡಬೇಕು ಎಂದು ಘೋಷಿಸಿದ ನಂತರ ಬಿಜೆಪಿ ಮುಖಂಡರು ಮಾತನಾಡುತ್ತಿಲ್ಲ. ಯಾವುದೇ ಅಭಿವೃದ್ಧಿ ಕಾರ್ಯ ನಡೆಸಲು ಲೆಕ್ಕಾಚಾರ ಅಗತ್ಯ. ಪಟ್ಟಣವನ್ನು ಸ್ವಚ್ಛಗೊಳಿಸುವ ಬಹುತೇಕ ಕಾರ್ಮಿಕರು ದಲಿತರು. ಅವರಿಗೂ ಸ್ಥಾನಮಾನ ನೀಡುವ ಅಗತ್ಯವಿದೆ. ಡಾ. ಅಂಬೇಡ್ಕರ್ ನೀಡಿದ ಸಂವಿಧಾನದಿಂದ ಇವೆಲ್ಲವೂ ಸಾಧ್ಯವಾಗಿದೆ ಎಂದರು.

ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಕಾಂಗ್ರೆಸ್‌ನಲ್ಲಿ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸುವುದಿಲ್ಲ. ಯುವ ಕಾಂಗ್ರೆಸ್ ಮೂಲಕ ಪಕ್ಷಕ್ಕೆ ದುಡಿಯುವ ಕಾರ್ಯಕರ್ತ ಮುಂದಿನ ದಿನದಲ್ಲಿ ಉನ್ನತ ಸ್ಥಾನಮಾನ ಹೊಂದಬಹುದಾಗಿದೆ. ಕಾಂಗ್ರೆಸ್ ಸಾಧನೆಯನ್ನು ಜನರಿಗೆ ತಲುಪಿಸುವ ಮುಖ್ಯ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದರು. ಲಕ್ಷ್ಮೀಶ ಗಬ್ಬಲಡ್ಕ ಮಾತನಾಡಿದರು.

ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ನೂತನ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಪ್ರದೀಪ್ ಕಲ್ಲೊಳ್ಳಿ ಮತ್ತು ತಂಡ ಪದಗ್ರಹಣ ಸ್ವೀಕರಿಸಿದರು. ಮಾಜಿ ಸಚಿವ ವಿನಯಕುಮಾರ್ ಸೊರಕೆ, ಸುಧೀರ್‌ಕುಮಾರ್ ಮುರೊಳ್ಳಿ, ಮಾರನಕೊಡಿಗೆ ನಟರಾಜ್, ಕೆ.ಆರ್.ವೆಂಕಟೇಶ್, ಭಾಸ್ಕರನಾಯ್ಕ, ದಿನೇಶ್ ಹೆಗ್ಡೆ, ಮಹಾಬಲ, ರಮೇಶ್ ಭಟ್, ಶಕೀಲಾ ಗುಂಡಪ್ಪ, ಪೂರ್ಣಿಮಾ ಸಿದ್ದಪ್ಪ ಇತರರಿದ್ದರು.