ಜಿಲ್ಲೆ

ಹಿಂದುಳಿದವರ ಪ್ರಗತಿಗೆ ಅರಸು ಕೊಡುಗೆ ಅಪಾರ

ಮದ್ದೂರು: ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ನಾಡು ನುಡಿಗಾಗಿ ಹಾಗೂ ವಿಶೇಷವಾಗಿ ಹಿಂದುಳಿದವರ ಪ್ರಗತಿಗೆ ನಿರಂತರವಾಗಿ ಶ್ರಮಿಸಿದ್ದಾರೆ ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.


ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ವತಿಯಿಂದ ಭಾನುವಾರ ಆಯೋಜಿಸಿದ್ದ ಡಿ.ದೇವರಾಜ ಅರಸು ಅವರ 108ನೇ ಜಯಂತಿ ಮತ್ತು ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸ್ತುತದಲ್ಲಿ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ದೊರೆಯುತ್ತಿರುವುದಕ್ಕೆ ಡಿ.ದೇವರಾಜ ಅರಸು ಅವರು ಕಾರಣ. ಸಣ್ಣ ಸಮಾಜಗಳು ಒಗ್ಗಟ್ಟಾಗಬೇಕು. ಹಿಂದುಳಿದ ವರ್ಗಗಳ ಪ್ರಗತಿಗೆ ನಾನು ಶಕ್ತಿ ಮೀರಿ ಶ್ರಮಿಸಲಿದ್ದೇನೆ. ನಿಮ್ಮ ಸಮಸ್ಯೆಗಳನ್ನು ನೇರವಾಗಿ ನನಗೆ ತಿಳಿಸಿದರೆ ಅವುಗಳನ್ನು ಬಗೆಹರಿಸುವ ಕೆಲಸ ಮಾಡುತ್ತೇನೆ. ನಿರಂತರವಾಗಿ ನಾನು ನಿಮ್ಮೊಂದಿಗೆ ಇರುತ್ತೇನೆ ಎಂದು ಭರವಸೆ ನೀಡಿದರು.


ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಜಿಲ್ಲಾಧ್ಯಕ್ಷ ಎಲ್.ಸಂದೇಶ್ ಮಾತನಾಡಿ, ಇಂದಿನ ರಾಜಕಾರಣಿಗಳು ಡಿ.ದೇವರಾಜ ಅರಸು ಅವರ ರೀತಿಯಲ್ಲಿ ದೂರ ಹಾಗೂ ಸಮಗ್ರ ದೃಷ್ಟಿ ಇಟ್ಟುಕೊಂಡು ಅಭಿವೃದ್ದಿ ಕೆಲಸಗಳನ್ನು ಮಾಡಬೇಕಿದೆ ಎಂದರು.


ಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ಉಗ್ರ ನರಸಿಂಹಸ್ವಾಮಿ ದೇಗುಲದ ಆವರಣದಿಂದ ವಿವಿಧ ಜಾನಪದ ಕಲಾತಂಡಗಳೊಂದಿಗೆ ಡಿ.ದೇವರಾಜ ಅರಸು ಅವರ ಭಾವಚಿತ್ರವನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು.


ಪಿ.ಶಶಿಕುಮಾರ್, ಆತಗೂರು ನಿಂಗಪ್ಪ, ನಾಗರಾಜು, ಮಂಚಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗಿಗೌಡ, ಕರ್ನಾಟಕ ರಾಜ್ಯ ಕಮ್ಮಾರ ಸಮಾಜ ರಾಜ್ಯ ಕಾರ್ಯದರ್ಶಿ ದಾಕ್ಷಾಯಿಣಿ ವೆಂಕಟೇಶ್, ಮಾನವ ಬಂಧುತ್ವ ವೇದಿಕೆ ಸಂಚಾಲಕ ದೇವರಾಜು ಕೊಪ್ಪ, ಬಿಸಿಎಂ ಅಧಿಕಾರಿ ಪ್ರಕಾಶ ಕೊರ್ಜಿ, ಬಿಇಒ ಸಿ.ಎಚ್.ಕಾಳೀರಯ್ಯ, ಪುರಸಭಾ ಮಾಜಿ ಅಧ್ಯಕ್ಷರಾದ ಎಂ.ಸಿ.ಬಸವರಾಜು, ಇಂತಿಯಾಜ್, ಜಿಪಂ ಮಾಜಿ ಸದಸ್ಯ ಎಂ.ಮರಿಹೆಗಡೆ ಇತರರಿದ್ದರು.