ಜಿಲ್ಲೆ

ಹಿಂದುಳಿದ ಸಮಾಜಗಳು ಸಂಘಟಿತವಾಗಲಿ

ಬೇಲೂರು: ಪ್ರತಿಯೊಬ್ಬರೂ ವಿದ್ಯಾವಂತರಾಗಿ, ಸಂಘಟಿತರಾದಾಗ ಮಾತ್ರ ಹಿಂದುಳಿದ ಸಮಾಜಗಳು ಉದ್ಧಾರವಾಗಲು ಸಾಧ್ಯ ಎಂದು ಭಗೀರಥ ಮಠದ ಪೀಠಾಧ್ಯಕ್ಷ ಡಾ.ಪುರುಷೋತ್ತಮಾನಂದಪುರಿ ಸ್ವಾಮೀಜಿ ಹೇಳಿದರು.

ಬೇಲೂರು ಶ್ರೀ ಚನ್ನಕೇಶವಸ್ವಾಮಿ ದೇಗುಲದಲ್ಲಿ ದೇವರಿಗೆ ವಿಶೇಷ ಅಭಿಷೇಕ, ಪೂಜೆ ನೆರವೇರಿಸಿದ ನಂತರ ತಾಲೂಕು ಉಪ್ಪಾರ ಯುವಕ ಸಂಘದಿಂದ ಚನ್ನಕೇಶವಸ್ವಾಮಿ ದಾಸೋಹ ಭವನದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆರ್ಶಿರ್ವಚನ ನೀಡಿದರು.

ನಮ್ಮ ಉಪ್ಪಾರ ಸಮಾಜವು ಬಹುದೊಡ್ಡ ಸಮುದಾಯವಾಗಿದೆ. ಆದರೆ, ನಮ್ಮಲ್ಲಿ ಶಿಕ್ಷಣದ ಕೊರತೆ ಹೆಚ್ಚಾಗಿ ಕಾಡುತ್ತಿದೆ. ಆದ್ದರಿಂದ ಸಮಾಜದ ಪ್ರತಿಯೊಬ್ಬರೂ ಉತ್ತಮ ಶಿಕ್ಷಣ ಪಡೆದು ಸಂಘಟಿತರಾಗಬೇಕು. ಆಗ ಮಾತ್ರ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸಮರ್ಪಕವಾಗಿ ಪಡೆಯಲು ಸಾಧ್ಯವಾಗಲಿದೆ. ಬೇಲೂರು ತಾಲೂಕಿನಲ್ಲಿ ಒಂದು ಗುರು ಪೀಠದ ಶಾಖಾ ಕೇಂದ್ರ ತೆರೆಯಲು ಸಿದ್ಧತೆ ಕೈಗೊಂಡಿದ್ದು, ಸ್ಥಳೀಯ ಶಾಸಕರ ಸಹಕಾರ ಪಡೆದು ನೀಲನಕ್ಷೆ ತಯಾರಿಸಲಾಗುವುದು. ಇದಕ್ಕೆ ಸಮಾಜದ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ. ಗುರುಪೀಠದಲ್ಲಿ ಶಿಕ್ಷಣ ಸಂಸ್ಥೆ ತೆರೆದು ಸಂಸ್ಕಾರಯುತ ಶಿಕ್ಷಣವನ್ನು ಮುಂದಿನ ಯುವ ಪೀಳಿಗೆಗೆ ನೀಡುವ ಕೆಲಸ ಮಾಡಲಾಗುವುದು ಎಂದರು.

ಶಾಸಕ ಕೆ.ಎಸ್. ಲಿಂಗೇಶ್ ಮಾತನಾಡಿ, ಉಪ್ಪಾರ ಸಮಾಜವು ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕವಾಗಿ ಮುಂದೆ ಬರಬೇಕೆಂದರೆ ಗುರು ಪರಂಪರೆಯಿಂದ ಮಾತ್ರ ಸಾಧ್ಯ. ಯಾವುದೇ ಮಠ ಮಾನ್ಯಗಳು ಎಂತಹ ಸಂಸ್ಥೆಯನ್ನು ತೆರೆದರೂ ಅದು ಮನುಕುಲದ ಉದ್ಧಾರಕ್ಕಾಗಿ ಮಾತ್ರ. ಅಂತಹ ಸಂಸ್ಥೆಗಳಲ್ಲಿ ಒಂದು ಸಮಾಜದವರು ಮಾತ್ರ ಇರುವುದಿಲ್ಲ. ಎಲ್ಲ ಜಾತಿ, ಧರ್ಮದವರು ಉಪಯೋಗ ಪಡೆಯುತ್ತಾರೆ. ಪರಮ ಪೂಜ್ಯರು ಬೇಲೂರಿನಲ್ಲಿ ಉತ್ತಮ ಶಿಕ್ಷಣ ಸಂಸ್ಥೆ ಹಾಗೂ ಉಚಿತ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲು ಮುಂದಾಗಿರುವುದು ಸ್ವಾಗತಾರ್ಹವಾಗಿದೆ. ಸಮಾಜದವರು ಖಾಲಿ ನಿವೇಶನ ಅಥವಾ ಸರ್ಕಾರಿ ಜಮೀನು ಇರುವುದನ್ನು ಗಮನಕ್ಕೆ ತಂದರೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ನಿವೇಶನ ನೀಡುವುದಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಉಪ್ಪಾರ ಸಮಾಜದ ಉಮೇಶ್, ಲಲಿತಮ್ಮ ಕುಟುಂಬದವರು ಶ್ರೀಮಠಕ್ಕೆ ಪಟ್ಟಣ ಸಮೀಪದಲ್ಲಿರುವ 5 ಗುಂಟೆ ಜಾಗ ನೀಡಿದರು. ಉಪ್ಪಾರ ಸಮಾಜದ ಜಿಲ್ಲಾಧ್ಯಕ್ಷ ನೀಲಪ್ಪ, ತಾಪಂ ಮಾಜಿ ಸದಸ್ಯೆ ಸುಧಾ ಸುರೇಶ್, ಪುರಸಭೆ ಸದಸ್ಯೆ ರತ್ನ ಸತ್ಯನಾರಾಯಣ, ಭಗೀರಥ ಯುವಕ ಸಂಘದ ಸದಸ್ಯರು ಹಾಜರಿದ್ದರು.