ಮಳವಳ್ಳಿ: ಉಳುವವನೇ ಭೂಮಿ ಒಡೆಯ ಕಾನೂನನ್ನು ಮಾಜಿ ಮುಖ್ಯಮಂತ್ರಿ ಡಿ. ದೇವರಾಜು ಅರಸು ಅವರು ಜಾರಿಗೆ ತರದಿದ್ದರೆ ಸಮಾಜದಲ್ಲಿ ಬಡವ, ಬಲ್ಲಿದನೆಂಬ ತಾರತಮ್ಯ ಹೋಗಲಾಡಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ತಹಸೀಲ್ದಾರ್ ಲೋಕೇಶ್ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಸೋಮವಾರ ತಾಲೂಕು ಆಡಳಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ದಿ.ಡಿ.ದೇವರಾಜು ಅರಸು ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅರಸು ಅವರು ಒಂದು ಆಯೋಗ ರಚಿಸಿ ಬಡವರು ಹಾಗೂ ಹಿಂದುಳಿದ ವರ್ಗಗಳಿಗೆ ಸಿಗಬೇಕಾದ ಸೌಲಭ್ಯಗಳ ಬಗ್ಗೆ ವರದಿ ಪಡೆದುಕೊಂಡು ಅದನ್ನು ಕಾರ್ಯರೂಪಕ್ಕೆ ತಂದರು. ಹಿಂದುಳಿದ ಹಾಗೂ ಕೆಳ ಸಮುದಾಯದ ಒಳಿತಿಗಾಗಿ ದಿಟ್ಟ ರಾಜನೀತಿಯನ್ನು ಅನುಸರಿಸಿದ ಅರಸು ಅವರ ಕೊಡುಗೆಯನ್ನು ಹಿಂದುಳಿದ ವರ್ಗಗಳ ಸಮುದಾಯ ಸ್ಮರಿಸಬೇಕು ಎಂದರು.
ಬಿಇಒ ಚಂದ್ರಪಾಟೀಲ್ ಮಾತನಾಡಿ, ಶ್ರೀಮಂತ ಮನೆತನದಲ್ಲಿ ಜನ್ಮ ತಳೆದ ಡಿ. ದೇವರಾಜ ಅರುಸು ಅವರು ತಮಗೆ ರಾಜಕೀಯವಾಗಿ ಸಿಕ್ಕ ಅಧಿಕಾರವನ್ನು ಸದ್ಬಳಕೆ ಮಾಡಿಕೊಂಡು ಬಡ ಹಾಗೂ ಹಿಂದುಳಿದ ವರ್ಗದ ಜನರಿಗೆ ಹೊಸ ಬದುಕು ಕಟ್ಟಿಕೊಟ್ಟರು ಎಂದರು.
ಗೇಡ್ 2 ತಹಸೀಲ್ದಾರ್ ಬಿ.ವಿ.ಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪ್ರಭಾರ ತಾಲೂಕು ಕಲ್ಯಾಣಾಧಿಕಾರಿ ನಾಗರಾಜು, ವಸತಿ ನಿಲಯ ಮೇಲ್ವಿಚಾರಕ ಸೋಮಶೇಖರ್ ಹಾಗೂ ತಾಲೂಕು ಕಚೇರಿ ಸಿಬ್ಬಂದಿ ಹಾಜರಿದ್ದರು.