ಮೈಸೂರು: ಹಿಂದುಳಿದ ವರ್ಗಗಳ ಪ್ರವರ್ಗ 2ಎಗೆ ಈಗಿರುವ ಮೀಸಲಾತಿ ಪ್ರಮಾಣ ಶೇ.27ಕ್ಕೆ ಹೆಚ್ಚಿಸಿ ಒಳಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದು ರಾಜ್ಯ ಕಾಯಕ ಸಮಾಜಗಳ ಒಕ್ಕೂಟ ಆಗ್ರಹಿಸಿದೆ.
ಕೆಲ ದಿನಗಳ ಹಿಂದೆ ನಗರದಲ್ಲಿ ರಾಜ್ಯ ಕಾಯಕ ಸಮಾಜಗಳ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯ ಪ್ರತಿನಿಧಿ ಪರಿಷತ್‌ನ ಮಹಾ ಅಧಿವೇಶನದಲ್ಲಿ ಕೆಲವೊಂದು ನಿರ್ಣಯ ತೆಗೆದುಕೊಂಡಿದ್ದು, ಅವುಗಳನ್ನು ಬಹಿರಂಗ ಪತ್ರದ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಳಹಿಸಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ ಕೆ.ಸಿ.ಪುಟ್ಟಸಿದ್ದಶೆಟ್ಟಿ ತಿಳಿಸಿದರು.
ಪ್ರವರ್ಗ 2ಎಗೆ ಈಗಿರುವ ಮೀಸಲಾತಿ ಪ್ರಮಾಣ ಹೆಚ್ಚಿಸುವುದರೊಂದಿಗೆ ಕಾಯಕ ಸಮಾಜಗಳ ಅಭಿವೃದ್ಧಿ ಪ್ರಾಧಿಕಾರ ರಚಿಸಿ 1 ಸಾವಿರ ಕೋಟಿ ರೂ. ಅನುದಾನ ಬಜೆಟ್‌ನಲ್ಲಿ ಒದಗಿಸಬೇಕು ಎಂದು ಆಗ್ರಹಿಸಿದರು.
ಈ ಹಿಂದಿನ ಬಜೆಟ್‌ನಲ್ಲಿ ಮೀಸಲಿರಿಸಿದ್ದ ಅನುದಾನದಲ್ಲಿ ಬಾಕಿ ಉಳಿದಿರುವ ಹಣವನ್ನು ಕಾಯಕ ಸಮುದಾಯಗಳ ಭವನಗಳ ನಿರ್ಮಾಣಕ್ಕೆ ನೀಡಬೇಕು.
ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 60 ರಿಂದ 70 ಸಾವಿರ ಮತ ಹೊಂದಿರುವ ಕಾಯಕ ಸಮಾಜಗಳಿಗೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು. ಸ್ಥಳೀಯ ಸಂಸ್ಥೆಗಳಿಗೆ ನೀಡುತ್ತಿದ್ದ ಶೇ.27ರಷ್ಟು ಸ್ಥಾನಗಳನ್ನು ಕಾಯಕ ಸಮಾಜಗಳಿಗೆ ನೀಡಿದ ನಂತರ ತಾಪಂ, ಜಿಪಂ, ನಗರಸಭೆ, ಪಾಲಿಕೆ ಚುನಾವಣೆ ನಡೆಸಬೇಕೆಂದು ಒತ್ತಾಯಿಸಿದರು.