ವಾಡಿ: ಹಿಂದುಳಿದ ವರ್ಗಗಳ ಧೀಮಂತ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜೀವನ ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದೆ ಎಂದು ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ಪ್ರಾಂಶುಪಾಲ ಉದಯ ಧರೆಣ್ಣವರ್ ಹೇಳಿದರು.
ನ್ಯೂಟೌನ್ ಏರಿಯದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರ 108ನೇ ವರ್ಷದ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಹಿಂದುಳಿದವರಿಗೆ, ದಲಿತರಿಗೆ ಬೆನ್ನೆಲುಬಾಗಿ ನಿಂತು ಮೂಲ ಸೌಲಭ್ಯ ಒದಗಿಸಿದ ಮುತ್ಸದ್ದಿ ರಾಜಕಾರಣಿಯಾಗಿದ್ದರು. ಅವರ ತತ್ವದಾರ್ಶಗಳನ್ನು ಇಂದಿನ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ದೇವರಾಜ ಅರಸು ಅವರು ಜನತಾ ವಸತಿ ಯೋಜನೆ, ಭಾಗ್ಯಜ್ಯೋತಿ ಯೋಜನೆ, ಉಳುವವನೆ ಭೂಮಿ ಒಡೆಯ, ಜನತಾ ನ್ಯಾಯಾಲಯ, ಜಿಲ್ಲಾ ನ್ಯಾಯಾಮಂಡಳಿ ಕಾಯ್ದೆಯ ಜೊತೆಗೆ ಜೀತ ಪದ್ದತಿ ನಿರ್ಮೂಲನೆಯಂತಹ ಉತ್ಕೃಷ್ಠ ಯೋಜನೆಗಳನ್ನು ಜಾರಿಗೆ ತಂದು, ಹಿಂದುಳಿದ ವರ್ಗಗಳಿಗೆ ಆತ್ಮವಿಶ್ವಾಸ ತುಂಬಿದವರಾಗಿದ್ದಾರೆ ಎಂದರು.
ದೈಹಿಕ ಶಿಕ್ಷಕ ಶ್ರೀನಾಥ ಹಿರಗೊಂಡ ಮಾತನಾಡಿದರು. ವಸತಿ ನಿಲಯಪಾಲಕ ನಾಗಪ್ಪ ಪೂಜಾರಿ, ಶಿಕ್ಷಕರಾದ ಸಭಾ ಸುಲ್ತಾನ್, ರಮೇಶ ಕೆ.ಎಸ್, ರಾಜು ಬಿ.ಪಾಟೀಲ, ಸಿದ್ಧಲಿಂಗ, ಅಂಬಿಕಾ, ಸಿದ್ದಲಿಂಗ ಶಿವರಾಜ, ರಾಜಶೇಖರ, ಶಾಲಾ ಸಿಬ್ಬಂದಿ ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.