ಜಿಲ್ಲೆ

ಹಿಂದುಳಿದ ಎಲ್ಲ ವರ್ಗಕ್ಕೂ ಮೀಸಲಾತಿ ಆಗ್ರಹ

ಮೈಸೂರು: ಆರ್ಥಿಕವಾಗಿ ಹಿಂದುಳಿದ ಎಲ್ಲ ವರ್ಗಗಳಿಗೂ ಮೀಸಲಾತಿ ನೀಡಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಸರ್ಕಾರವನ್ನು ಆಗ್ರಹಿಸಿದೆ.
ಕೇಂದ್ರ ಸರ್ಕಾರ 103ನೇ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.4ರಿಂದ 5ರಷ್ಟಿರುವ ಸಮುದಾಯ ಆರ್ಥಿಕವಾಗಿ ಹಿಂದುಳಿದೆ ಎನ್ನುವ ಕಾರಣ ನೀಡಿ ಶೇ.10 ಮೀಸಲಾತಿ ನೀಡಿದೆ. ಹೀಗಾಗಿ, ಇತರ ಹಿಂದುಳಿದ ವರ್ಗಗಳಿಗೂ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನಿಗದಿಪಡಿಸಬೇಕು ಎಂದು ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಹಿಂದುಳಿದ ವರ್ಗಗಳ ಮೀಸಲಾತಿ ಪ್ರಮಾಣವನ್ನು ಎರಡು-ಎ ವರ್ಗಕ್ಕೆ ಶೇ.15ರಿಂದ 27ಕ್ಕೆ ಹೆಚ್ಚಿಸಬೇಕು. ಜತೆಗೆ ಪ್ರವರ್ಗ ಒಂದರ ಅಡಿಯಲ್ಲಿ ಬರುವ ಮೀಸಲಾತಿ ಪ್ರಮಾಣವನ್ನು ಶೇ.4ರಿಂದ ಶೇ.9ಕ್ಕೆ ಹೆಚ್ಚಿಸಬೇಕು. ಇದುವರೆಗೂ ಮೀಸಲಾತಿ ವಿರೋಧಿಸುತ್ತಿದ್ದವರು ಕೂಡ ಇಂದು ಮೀಸಲಾತಿ ನಮಗೂ ಬೇಕು ಎಂಬ ಬೇಡಿಕೆ ಇರಿಸುತ್ತಿದ್ದಾರೆ. ಸಂವಿಧಾನದ ಆಶಯಗಳಿಗೆ ಧಕ್ಕೆಯಾಗದ ರೀತಿ ಮೀಸಲಾತಿ ಜಾರಿಗೊಳಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದರು.
ನಗರಪಾಲಿಕೆ ಮಾಜಿ ಸದಸ್ಯ ಡಿ.ನಾಗಭೂಷಣ್, ಸವಿತ ಸಮಾಜದ ಎನ್.ಆರ್.ನಾಗೇಶ್, ವಿವಿಧ ಸಂಘಟನೆಗಳ ರವಿನಂದನ್, ಯೋಗೀಶ್ ಉಪ್ಪಾರ್, ಮೊಗಣ್ಣಾಚಾರ್, ಲೋಕೇಶ್‌ಕುಮಾರ್ ಮಾದಾಪುರ, ಹರೀಶ್ ಮೊಗಣ್ಣ, ಎಚ್.ಪ್ರಕಾಶ್ ಇದ್ದರು.