ಸಂಡೂರು: ಈಜಿಪ್ಟ್ ಸೇರಿದಂತೆ ಅನೇಕ ದೇಶಗಳಲ್ಲಿ ಸಂಸ್ಕೃತಿ ಮತ್ತು ನಾಗರಿಕತೆ ನಾಶವಾಗಿದೆ ಎಂದು ಆರ್‌ಎಸ್‌ಎಸ್ ಜಿಲ್ಲಾ ಕಾರ್ಯವಾಹ ಶಶಿಕಾಂತ್ ಹೇಳಿದರು.
ಪಟ್ಟಣದ ಎಸ್‌ಇಎಸ್ ಕಾಲೇಜು ಅವರಣದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಚಾಲನೆ ನೀಡಿ ಭಾನುವಾರ ಮಾತನಾಡಿದರು. ಭಾರತದಲ್ಲಿ ಹಿಂದುಗಳು ಮತ್ತು ಹಿಂದುತ್ವ ತುಳಿಯಲು ಅನೇಕ ತಂತ್ರಗಾರಿಕೆ ನಡೆದಿದ್ದರೂ ಯಶಸ್ವಿಯಾಗಿಲ್ಲ. ಹಿಂದು ಧರ್ಮ ಮತ್ತು ಸಂಸ್ಕೃತಿ ನಾಶವಾಗುವುದಿಲ್ಲ. ಜಗತ್ತು ಹಿಂದುತ್ವವನ್ನು ಒಪ್ಪಿಕೊಳ್ಳುತ್ತಿದೆ. ಜಗತ್ತನ್ನು ಸರಿಯಾದ ದಾರಿಗೆ ಕೊಂಡೊಯ್ಯಬೇಕಾದರೆ ಭಾರತ ಶಕ್ತಿಶಾಲಿ ರಾಷ್ಟ್ರವಾಗಬೇಕು ಎಂದರು.
ಆರ್‌ಎಸ್‌ಎಸ್ ಜಿಲ್ಲಾ ವಿಭಾಗ ಪ್ರಚಾರಕ ಸೋಮಶೇಖರ್ ಒಣರೊಟ್ಟಿ, ನಿವೃತ್ತ ಡಿವೈಎಸ್ಪಿ ರಾಮರಾವ್, ತಾಲೂಕು ಸಂಯೋಜಕ ಔದುಂಬರ ಭಟ್, ಕುಮಾರಸ್ವಾಮಿ ಶಾಖೆ ಪಾಲಕ ಪರಮೇಶ್ವರ್, ಬಿಜೆಪಿ ಮಂಡಲ ಅಧ್ಯಕ್ಷ ಅಶೋಕ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಜಿ.ಟಿ.ಪಂಪಾಪತಿ, ಕಾರ್ಯದರ್ಶಿ ಉಡೇದ ಸುರೇಶ್, ತಾಲೂಕು ಮಾಜಿ ಅಧ್ಯಕ್ಷ ನಾನಾ ನಿಕ್ಕಂ, ಪ್ರಮುಖರಾದ ವಸಂತಕುಮಾರ್, ವೆಂಕಟಸುಬ್ಬಯ್ಯ ಇತರರಿದ್ದರು.
ಗಣವೇಷಧಾರಿಗಳ ಪಥಸಂಚಲನ ಎಸ್‌ಇಎಸ್ ಕಾಲೇಜಿನಿಂದ ವಿಜಯ ವೃತ್ತ, ಪುರಸಭೆ ಬಸ್ ನಿಲ್ಧಾಣ, 8 ಕೊಳಾಯಿ ರಸ್ತೆ ಮೂಲಕ ಸಂಚರಿಸಿತು.