ಜಿಲ್ಲೆ

ಹಿಂದು ರಾಷ್ಟ್ರ ನಮ್ಮ ಜನ್ಮಸಿದ್ಧ ಅಧಿಕಾರ, ಧನಂಜಯ ಜಯರಾಂ ದೇಸಾಯಿ ಹೇಳಿಕೆ

ದಾವಣಗೆರೆ: ಭಾರತವನ್ನು ಮುಂದಿನ 25 ವರ್ಷದಲ್ಲಿ ಮುಸ್ಲಿಂ ರಾಷ್ಟ್ರವಾಗಿಸುವ ಹುನ್ನಾರ ನಡೆಯುತ್ತಿದೆ. ಇದಕ್ಕೆ ನಮ್ಮ ಸಂಘಟನೆ ಅವಕಾಶ ನೀಡುವುದಿಲ್ಲ. ಹಿಂದು ರಾಷ್ಟ್ರ ನಿರ್ಮಾಣ ನಮ್ಮ ಜನ್ಮಸಿದ್ಧ ಅಧಿಕಾರವಾಗಿದೆ ಎಂದು ಹಿಂದು ರಾಷ್ಟ್ರ ಸೇನೆ ರಾಷ್ಟ್ರೀಯ ಅಧ್ಯಕ್ಷ ಧನಂಜಯ ಜಯರಾಂ ದೇಸಾಯಿ ಹೇಳಿದರು.

ದಾವಣಗೆರೆಯಲ್ಲಿ ಭಾನುವಾರ ಹಿಂದು ರಾಷ್ಟ್ರ ಸೇನೆಯ ಜಿಲ್ಲಾ ಘಟಕವನ್ನು ಉದ್ಘಾಟಿಸಿ ಮಾತನಾಡಿ, ಹಿಂದು ಸಮುದಾಯದೊಳಗೆ ಒಡಕು ತರುವ ಷಡ್ಯಂತ್ರ ನಡೆಯುತ್ತಿದೆ. ಹಿಂದುಗಳನ್ನು ಸಂಘಟಿಸುವ, ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು. ಶಾಲಾ-ಕಾಲೇಜುಗಳಲ್ಲಿ ಗಣೇಶೋತ್ಸವ ಆಚರಣೆ ಬೇಡ ಎನ್ನಲು ವಕ್ಫ್ ಬೋರ್ಡ್‌ಗೆ ಯಾವ ಹಕ್ಕಿದೆ? ಈ ಮಂಡಳಿಯನ್ನೇ ವಿಸರ್ಜಿಸಿ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದರು. ರಾಜ್ಯದಲ್ಲಿ ಇದುವರೆಗೆ 10 ಹಿಂದು ಯುವಕರ ಹತ್ಯೆಯಾಗಿವೆ. ಹೀಗಾಗಿ ಇಂದಿನ ಮಕ್ಕಳನ್ನು ದೈಹಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಬಲಪಡಿಸುವುದು ಅಗತ್ಯವಿದೆ. ಮಕ್ಕಳನ್ನು ಗುಟ್ಕಾ- ಸಿಗರೇಟು ಸಂಸ್ಕೃತಿಯಿಂದ ದೂರ ಮಾಡಲು ಅಗ್ನಿಪಥ ತರಬೇತಿಗೆ ಕಳಿಸುವತ್ತ ತಾಯಂದಿರು ಗಮನ ಹರಿಸಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಐರಣಿ ಹೊಳೆಮಠದ ಶ್ರೀ ಬಸವರಾಜ ದೇಶಿಕೇಂದ್ರ ಸ್ವಾಮೀಜಿ, ಶ್ರೀರಾಮಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಪರಶುರಾಮ ನಡುಮನೆ, ಹಿಂದೂ ರಾಷ್ಟ್ರ ಸೇನೆ ರಾಜ್ಯ ಪ್ರವರ್ತ ಕೆ.ಎನ್. ಸಂದೀಪ್, ಶಿವಮೊಗ್ಗದ ದೀನ್ ದಯಾಳ್, ಮುಖಂಡ ರವಿ ಇದ್ದರು. ಇದೇ ವೇಳೆ ಮಕ್ಕಳಿಂದ ಕರಾಟೆ ಪಟ್ಟುಗಳ ಪ್ರದರ್ಶನ ನಡೆಯಿತು.