ಜಿಲ್ಲೆ

ಹಿಂದು-ಮುಸ್ಲಿಂ ಯುವಕರು ಸೌಹಾರ್ದತೆ ಸಂದೇಶ, ಒಗ್ಗಟ್ಟನಿಂದ ಈದ್ ಮಿಲಾದ್, ಗೌರಿ-ಗಣೇಶ ಹಬ್ಬ ಆಚರಣೆ

ಮೈಸೂರು: ಹಿಂದು-ಮುಸ್ಲಿಂ ಯುವಕರು ಒಟ್ಟಾಗಿ ಗೌರಿ-ಗಣೇಶ ಹಬ್ಬವನ್ನು ಆಚರಿಸುವ ಮೂಲಕ ಗಮನ ಸೆಳೆದರು.
ಗಣಪತಿ ಯುವಕರ ಸಂಘದ ಪದಾಧಿಕಾರಿಗಳು ನಗರದ ಅಗ್ರಹಾರದ ಕುಂದೂರು ಮಠದ ರಸ್ತೆಯಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಹಬ್ಬ ಆಚರಿಸುವ ಮೂಲಕ ಭಾವೈಕ್ಯ ಮೆರೆದಿದ್ದಾರೆ. ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಸಿಹಿ ತಿನಿಸಿ, ಹಿಂದು ಮುಸ್ಲಿಂ ಭಾಯಿ…ಭಾಯಿ.. ಎಂಬ ಸಂದೇಶವನ್ನು ಜನತೆಗೆ ರವಾನಿಸಿದರು.
ಕೆಪಿಸಿಸಿ ಸದಸ್ಯ ನಜರ್‌ಬಾದ್ ನಟರಾಜ್ ಮಾತನಾಡಿ, ದೇಶದಲ್ಲಿ ಹಲವಾರು ಹಬ್ಬಗಳನ್ನು ಆಚರಣೆ ಮಾಡುತ್ತಿದ್ದು, ಈ ಬಾರಿ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬ ಸಮೀಪ ಬಂದಿದ್ದರಿಂದ ಉಭಯ ಸಮಾಜದ ಬಾಂಧವರು ಈ ಹಬ್ಬಗಳನ್ನು ಬಹಳ ಶಾಂತಿಯುತವಾಗಿ ಆಚರಣೆ ಮಾಡಿ ಸೌಹಾರ್ದತೆಯಿಂದ ಬಾಳುವಂತೆ ಕೋರಿದರು.
ಶ್ರೀಗಣಪತಿ ಯುವಕರ ಸಂಘದ ಮುಖ್ಯ ಸಂಚಾಲಕ ಮೋಹನ್ ಕುಮಾರ್‌ಗೌಡ ಮಾತನಾಡಿ, ಇತಿಹಾಸದಲ್ಲಿ ಎರಡು ಸಮುದಾಯಗಳ ಹಬ್ಬಗಳು ಬಂದರೆ ಸೌಹಾರ್ದವಾಗಿ ಆಚರಣೆ ಮಾಡುವ ಪದ್ಧತಿ ನಮ್ಮ ನಾಡಿನಲ್ಲಿದೆ. ಆದರೆ ಕೆಲವು ಕಿಡಿಗೇಡಿಗಳಿಂದ ಎರಡು ಸಮಾಜದಲ್ಲಿ ಶಾಂತಿಯನ್ನು ಕದಡವ ಯತ್ನಗಳು ನಡೆಯುತ್ತಿದ್ದು, ಆದ್ದರಿಂದ ಎರಡು ಸಮುದಾಯದ ಮುಖಂಡರು ಈ ಬಗ್ಗೆ ಲಕ್ಷೃ ವಹಿಸಿ ಹಬ್ಬಗಳನ್ನು ಆಚರಣೆ ಮಾಡಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಈ ದಿನ ಯುವಕರು ಒಟ್ಟಾಗಿ ಸೌಹಾರ್ದತೆಯಿಂದ ಎರಡು ಹಬ್ಬವನ್ನು ಆಚರಿಸುತ್ತಾ ಬಂದಿರುವುದು ಬಹಳ ಸಂತಸದ ವಿಚಾರ. ಇದೇ ರೀತಿ ಸೌಹಾರ್ದತೆ ಆಚರಣೆ ಪ್ರತಿ ಜಿಲ್ಲೆಯಲ್ಲಿ ನಡೆದರೆ ರಾಜ್ಯದಲ್ಲಿ ಬಹಳ ಉತ್ತಮ ಬೆಳವಣಿಗೆ ಕಾಣಲು ಸಾಧ್ಯ ಎಂದರು.
ಮುಖಂಡರಾದ ಸಗೀರ್ ಅಹಮದ್, ಅಪ್ರೋಜ್ ಖಾನ್, ಸಾಹೇದ್ ಮುಗುದುಮ್, ನೂರ್ ಶರೀಫ್, ಸೈಯದ್ ಫಾಸಿಲ್, ಖಾಲಿದ್ ಅಹಮದ್, ನಾಗೇಂದ್ರ, ನಿಹಾಲ್, ಭುವನ್, ಪೈ.ವಿಶೃತ್ ಎಸ್.ಗೌಡ, ರಕ್ಷಿತ್, ಯಶಸ್ ಎಸ್.ಗೌಡ ಇತರರು ಇದ್ದರು.