ಅಥಣಿ ಗ್ರಾಮೀಣ: ತಾಲೂಕಿನ ಕೊಕಟನೂರ ಗ್ರಾಮದಲ್ಲಿ ಭಾನುವಾರ ತ್ಯಾಗ, ಬಲಿದಾನಗಳ ಪ್ರತೀಕ ಹಿಂದು ಮತ್ತು ಮುಸ್ಲಿಂರ ಭಾವೈಕ್ಯ ಸಾರುವ ಮೊಹರಂ ಹಬ್ಬವನ್ನು ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು.
ಕುಲಕರ್ಣಿ, ದೇಸಾಯಿ, ಪೂಜಾರಿ ಹಾಗೂ ಇಸ್ಲಾಂ ಧರ್ಮದವರ ಹೆಸರಿನಲ್ಲಿ ಸ್ಥಾಪಿಸಿದ ಐದು ಪಂಝಾ ದೇವರಿನ್ನು ಭಾನುವಾರ ದೇಸಾಯಿ ವಾಡೆಗೆ ಕರೆ ತಂದು, ಅಲ್ಲಿ ಗ್ರಾಮದ ಹಿಂದು ಹಾಗೂ ಮುಸ್ಲಿಂ ಧರ್ಮದ ಎಲ್ಲ ಜನರು ಸಾಮರಸ್ಯದಿಂದ ನೈವೇದ್ಯ ಅರ್ಪಿಸಿದರು.
ಬಳಿಕ ಗ್ರಾಮದ ವಿವಿಧ ಪ್ರಮುಖ ಬಡಾವಣೆಯಲ್ಲಿ ಕರಬಲ್ ಹಾಡು, ಹಲಗೆ, ಲೇಝಿಮ್, ಡೊಳ್ಳು ಹಾಗೂ ವಿವಿಧ ವಾದ್ಯ ಮೇಳದೊಂದಿಗೆ ಮೆರವಣಿಗೆ ಜರುಗಿತು. ಸಂಜೆ ಗ್ರಾಮದ ಹಿರೇ ಹಳ್ಳದಲ್ಲಿ ಸಂಪ್ರದಾಯದಂತೆ ಹೊಳೆಗೆ ಹೋಗುವ ಮೂಲಕ ಮೊಹರಂ ಸಂಪನ್ನವಾಯಿತು.
ಬಸೀರಸಾಬ್ ಮುಲ್ಲಾ, ನಬಿಸಾಬ್ ಮುಜಾವರ, ವಿಶಾಲ ದೇಸಾಯಿ, ಶ್ರೀಪಾದ ಕುಲಕರ್ಣಿ, ಅರುಣ ಮುದಕಣ್ಣವರ ಅರ್ಜುನ ಪೂಜಾರಿ, ರಾಜೇಂದ್ರ ಪಾಟೀಲ, ರಾವಸಾಹೇಬ ಹಳಕಿ, ವಿಠ್ಠಲ ಮಾಳಿ ಇತರರಿದ್ದರು.