ಚಿತ್ರದುರ್ಗ: ನಗರದಲ್ಲಿ ಸೆ. 28ರಂದು ನಡೆಯುವ ಹಿಂದು ಮಹಾಗಣಪತಿ ಶೋಭಾಯಾತ್ರೆಯ ದೃಶ್ಯಗಳನ್ನು ಇದೇ ಮೊದಲ ಬಾರಿಗೆ ಸಿಸಿ ಕ್ಯಾಮರಾಗಳಲ್ಲಿ ಚಿತ್ರೀಕರಿಸಿ ನೇರ ಪ್ರಸಾರ ಮಾಡಲಾಗುವುದು ಎಂದು ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 150 ಕಡೆಗಳಲ್ಲಿ ಸಿಸಿ ಟಿವಿ ಅಳವಡಿಸಲಾಗಿದೆ. ದೃಶ್ಯಾವಳಿಗಳ ನೇರ ಪ್ರಸಾರಕ್ಕೆ ಮೆರವಣಿಗೆ ಸಾಗುವ ಮಾರ್ಗದ 4 ಕಡೆಗಳಲ್ಲಿ ಎಲ್‌ಇಡಿ ಸ್ಕ್ರೀನ್‌ಗಳನ್ನು ಅಳವಡಿಸಲಾಗುವುದು. ಕಿಡಿಗೇಡಿಗಳನ್ನು ಕೂಡಲೇ ವಶಕ್ಕೆ ಪಡೆಯಲು ಇದರಿಂದ ಸಾಧ್ಯವಾಗಲಿದೆ ಎಂದರು.
ಕಿಡಿಗೇಡಿಗಳ ವರ್ತನೆ ಸಾರ್ವಜನಿಕರ ಗಮನಕ್ಕೂ ತಕ್ಷಣ ಗೊತ್ತಾಗಲಿದ್ದು, ಸಿಸಿ ಕ್ಯಾಮರಾ ದೃಶ್ಯಾವಳಿ ವೀಕ್ಷಣೆಗೆ ನಗರ ಠಾಣೆಯಲ್ಲಿ ಕಮ್ಯಾಂಡ್ ಸೆಂಟರ್ ಅನ್ನು ಆರಂಭಿಸಲಾಗಿದೆ. 72 ವಿಡಿಯೋಗ್ರಾಫರ್ಸ್, 5 ಡ್ರೋನ್ ಕ್ಯಾಮರಾ ಹಾಗೂ 50 ಸ್ಕೈಸೆಂಟ್ರಿಗಳ ಮೂಲಕ ಹದ್ದಿನ ಕಣ್ಣು ಇಡಲಾಗುವುದು ಎಂದರು.
ಶಾಂತಿಯುತ ಮೆರವಣಿಗೆಗಾಗಿ ಬೆಂಗಳೂರು ಕೇಂದ್ರ ಹಾಗೂ ದಾವಣಗೆರೆ ವಲಯಗಳಿಂದ ಹೆಚ್ಚುವರಿ ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ. ಎಸ್‌ಪಿ, ಆರು ಜನ ಎಎಸ್‌ಪಿ, 353 ಡಿಎಸ್‌ಪಿ, ಸಿಪಿಐ, ಪಿಎಸ್‌ಐ, ಎಎಸ್‌ಐ ಸಹಿತ 3500ಕ್ಕೂ ಹೆಚ್ಚು ಅಧಿಕಾರಿ, ಪೊಲೀಸ್ ಹಾಗೂ ಗೃಹರಕ್ಷಕ ದಳ ಸಿಬ್ಬಂದಿಯೊಂದಿಗೆ 10 ಕೆಎಸ್‌ಆರ್‌ಪಿ, 12 ಡಿಎಆರ್ ಹಾಗೂ 4 ಕ್ಯೂಆರ್‌ಟಿ ತಂಡಗಳಿರುತ್ತವೆ.
ಮಹಿಳಾ ಕಲಾವಿದರು, ಸ್ತ್ರೀಯರ ರಕ್ಷಣೆಗೆ ಮಹಿಳಾ ಪೊಲೀಸ್ ಅಧಿಕಾರಿ, ಸಿಬ್ಬಂದಿ ತಂಡಗಳಿರುತ್ತವೆ. ಮಹಿಳೆಯರು ಚಿನ್ನಾಭರಣ ಧರಿಸದೆ ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕು. ಸರಗಳ್ಳತನ, ಮೊಬೈಲ್ ಕಳ್ಳತನ, ಪಿಕ್‌ಪಾಕೆಟ್ ತಡೆಗೆ ವಿವಿಧ ಜಿಲ್ಲೆಗಳ ಕ್ರೈಮ್ ಸಿಬ್ಬಂದಿ ಕಾರ‌್ಯಾಚರಣೆ ನಡೆಸಲಿದ್ದಾರೆ. 2-3 ಡಿಜೆಗಳಿಗೆ ಷರತ್ತುಬದ್ಧ ಅನುಮತಿ ನೀಡಲಾಗುವುದು ಎಂದರು.
ಮೆರವಣಿಗೆ ಸಾಗುವ ಮಾರ್ಗ ಹಾಗೂ ಬಿಡಿ ರಸ್ತೆಯಲ್ಲಿ ಎಲ್ಲ ಮಾದರಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಶಿವಮೊಗ್ಗ, ದಾವಣಗೆರೆ, ಬೆಂಗಳೂರು, ಹೊಸಪೇಟೆ, ಚಳ್ಳಕೆರೆ, ಭೀಮಸಮುದ್ರ ಕಡೆಯಿಂದ ನಗರಕ್ಕೆ ಬರುವಂಥ ಎಲ್ಲ ಸಾರಿಗೆ ವಾಹನಗಳು ರಾಷ್ಟ್ರೀಯ ಹೆದ್ದಾರಿ 48ರ ಮೂಲಕ ನಗರದ ಮೆದೇಹಳ್ಳಿ ರಸ್ತೆ ಮತ್ತು ಜಿಎಂಐಟಿ ಮೂಲಕ ಬಂದು ಅದೇ ಮಾರ್ಗದಲ್ಲಿ ನಿರ್ಗಮಿಸಬೇಕು ಎಂದರು.
ಶೋಭಾಯಾತ್ರೆಯ ಅಂಗವಾಗಿ ನಗರದಲ್ಲಿ ಗುರುವಾರ ನಡೆದ ಬೈಕ್ ರ‌್ಯಾಲಿಯ ವೇಳೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು.