ಗೋಣಿಕೊಪ್ಪ: ಕೊಡಗು ಹಿಂದೂ ಮಲಯಾಳಿ ಸಮಾಜದ ಮುಖ್ಯ ಸಮಿತಿಯ ಪದಾಧಿಕಾರಿಗಳು, ಶ್ರೀಮಂಗಲ, ಪಾಲಿಬೆಟ್ಟ ಉಪ ಸಮಿತಿಗಳ ಪದಾಧಿಕಾರಿಗಳು ಭಾನುವಾರ ಕೊಡಗು ಇಂಟರ್‌ನ್ಯಾಷನಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪದಗ್ರಹಣ ಸ್ವೀಕರಿಸಿದರು.
ಸಮಾಜದಿಂದ ರೂಪಿಸಿರುವ ನೂತನ ಕಾರ್ಯಕ್ರಮಗಳ ಪಟ್ಟಿಯನ್ನು ಅಂತಾರಾಷ್ಟ್ರೀಯ ಓಟಗಾರ್ತಿ ಡಾ.ಪಿ.ಟಿ.ಉಷಾ ಬಿಡುಗಡೆಗೊಳಿಸಿದರು. ಸಮಾಜಕ್ಕೆ 3 ಕೋಟಿ ರು. ವೆಚ್ಚದಲ್ಲಿ ಸಮುದಾನ ಭವನ ನಿರ್ಮಾಣ, ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಶಿಕ್ಷಣಕ್ಕೆ ಪೋತ್ಸಾಹ ನೀಡುವುದು, ಸದಸ್ಯರ ಅಗತ್ಯಕ್ಕೆ ಪೂರಕ ನೆರವು, ವಾರ್ಷಿಕ ಕ್ರೀಡಾಕೂಡ, ಭರತನಾಟ್ಯ, ನೃತ್ಯ ಕಲೆಗೆ ಪ್ರೋತ್ಸಾಹಿಸಲು ಮಹಿಳೆಯರಿಗೆ ತರಬೇತಿ ಯೋಜನೆಗಳನ್ನು ಪ್ರಕಟಿಸಲಾಯಿತು.
ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಜನಾಂಗದ ಆಚಾರ-ವಿಚಾರ, ಸಂಸ್ಕೃತಿ ಪೋಷಣೆ ಮುಖ್ಯ. ಸಮಾಜಕ್ಕೆ ಬೇಕಾದ ಸರ್ಕಾರದ ಅನುದಾನ ನೀಡುವುದಾಗಿ ಭರವಸೆ ನೀಡಿದರು. ರಾಜ್ಯಸಭಾ ಸದಸ್ಯೆ ಡಾ.ಪಿ.ಟಿ.ಉಷಾ ಮಾತನಾಡಿ, ಸರ್ಕಾರ ರಾಜ್ಯಸಭಾ ಸದಸ್ಯೆಯಾಗಿ ನಾಮ ನಿರ್ದೇಶನ ಮಾಡಿರುವುದು ಕ್ರೀಡೆಗೆ ನೀಡಿದ ಗೌರವವಾಗಿದೆ. ನಮ್ಮ ಪ್ರಯತ್ನದಿಂದ ಹೆಚ್ಚು ಸಾಧನೆಗೆ ಅವಕಾಶ ಸಿಗುತ್ತದೆ ಎಂದರು.
ಸನ್ಮಾನ: ಸಮಾಜದ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದವರು, ಕ್ರೀಡೆ, ಸಾಮಾಜಿಕ ಸೇವೆ, ರಕ್ತದಾನ, ಕರೊನಾ ವಾರಿಯರ್ ಸೇವೆ ನೀಡಿದವರನ್ನು ಸನ್ಮಾನಿಸಲಾಯಿತು. ಫೋಟೋಗ್ರಫಿ ಪ್ರಶಸ್ತಿ ಪಡೆದ ಸಿ.ಕೆ.ಸುರೇಶ್, ಸಾಧಕರಾದ ಕೆ.ಕೆ.ಸುಷಾ, ಪುಷ್ಪಾ ಅಶೋಕ್, ಗೌತಂ ಕೃಷ್ಣ ವಿಜಯನ್, ಸಾಮಾಜಿಕ ಕ್ಷೇತ್ರದಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಜಿಲ್ಲಾ ಪ್ರಶಸ್ತಿ ಪುರಸ್ಕೃತರಾದ ಸಣ್ಣುವಂಡ ಕಿಶೋರ್ ನಾಚಪ್ಪ, ಕೆ.ಬಿ.ಜಗದೀಶ್ ಜೋಡುಬೀಟಿ, ಎಚ್.ಕೆ.ಜಗದೀಶ್ ಹಾಗೂ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.