ಮೂಡಿಗೆರೆ: ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯವನ್ನು ನಾನಾ ಕಾರಣಗಳಿಂದ ಮುಚ್ಚಿಡುವುದರಿಂದ ದೌರ್ಜನ್ಯ ಪ್ರಕರಣಗಳು ಇನ್ನೂ ಹೆಚ್ಚಾಗುತ್ತವೆ. ಹಾಗಾಗಿ ದೂರು ನೀಡಬೇಕೆಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಡಿ.ಸಚಿನ್ ಹೇಳಿದರು. ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಶನಿವಾರ ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಆರೋಗ್ಯ, ಅಭಿಯೋಜನೆ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಿಳೆಯರು ದೌರ್ಜನ್ಯ ಸಹಿಸಿಕೊಳ್ಳಬಾರದು. ಎಲ್ಲೇ ದೌರ್ಜನ್ಯ ನಡೆದರೂ ಸಂಬಂಧಿಸಿದ ಇಲಾಖೆಗೆ ದೂರು ಸಲ್ಲಿಸಬೇಕು ಎಂದು ಹೇಳಿದರು. ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕಲಂ 354 ಎ,ಬಿ,ಸಿ ಮತ್ತು ಡಿ ಅಡಿಯಲ್ಲಿ ಕೇಸ್ ದಾಖಲಿಸಬಹುದು. ಆರ್ಥಿಕ ತೊಂದರೆ ಇದ್ದರೆ ತಾಲೂಕು ಕಾನೂನು ಸೇವೆಗಳ ಸಮಿತಿಯಿಂದ ಉಚಿತವಾಗಿ ಪ್ರಕರಣ ನಡೆಸಲು ವಕೀಲರನ್ನು ನೇಮಿಸಲಾಗುವುದು ಎಂದು ತಿಳಿಸಿದರು. ಕರ್ತವ್ಯನಿರತ ಸ್ಥಳದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಹಕ್ಕು ಹಾಗೂ ಕರ್ತವ್ಯಗಳ ಕುರಿತು ಮಾಹಿತಿ ನೀಡಿದರು.