ಜಿಲ್ಲೆ

ಹಿಂದು ಕಾರ್ಯಕರ್ತರ ವಿರುದ್ಧ ಕೇಸ್

ರಮೇಶ ಮೇಳಕುಂದಾ

ಕಲಬುರಗಿ: ಕಾಳಗಿ ತಾಲೂಕಿನ ರಟಕಲ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವಸತಿ ನಿಲಯದಲ್ಲಿ ಪೂಜೆ ವೇಳೆ ದಾಳಿ ಮಾಡಿ, ಜಾತಿ ನಿಂದನೆ ಮಾಡಿದ್ದಾರೆ ಎಂಬ ಆರೋಪದಲ್ಲಿ ಒಂಬತ್ತು ಜನರ ವಿರುದ್ಧ ರಟಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಟಕಲ್ ಗ್ರಾಮದ ಶಂಕರ ಚೋಕಾ, ಬಸವರಾಜ ತಳವಾರ, ವಿಷ್ಣು, ಸಿಗಿ ಗುಂಡು, ಮಲ್ಲಿಕಾರ್ಜುನ ಜಮಾದಾರ, ವೀರೇಶ ಗಂಗಾಣಿ, ವಿನೋದ ಸೀಗಿ, ಕಲ್ಯಾಣಿ, ವಿಜಯಕುಮಾರ ಸೇರಿ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಏನಿದು ಪ್ರಕರಣ: ಫೆ.೨೨ರಂದು ಸಂಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ವಸತಿ ನಿಲಯದ ಕೋಣೆಯಲ್ಲಿ ಪೂಜೆ ಮಾಡುತ್ತ ಕುಳಿತಿರುವಾಗ ೧೦, ೧೫ಜನರು ಗುಂಪು ಕಟ್ಟಿಕೊಂಡು ಬಂದು ಮನೆಗೆ ನುಗ್ಗಿ, ಕ್ರಿಶ್ಚಿಯನ್ ದೇವರ ಪೂಜೆ ಮಾಡುತ್ತೀರಿ ಏಕೆ ಎಂದು ನಿಂದಿಸಿ, ಅನುಚಿತವಾಗಿ ವರ್ತಿಸಿದ್ದಾರೆ ಎಂದು ನರ್ಸ್ ಅಶ್ವಿನಿ ದೂರು ನೀಡಿದ್ದಾರೆ. ಫೆ.೨೩ರಂದು ಬೆಳಗ್ಗೆ ಆಸ್ಪತ್ರೆಗೆ ಸೇವೆಗೆ ಹೋಗುವಾಗ ಜೀವ ಭಯ ಹಾಕಿದ್ದಾರೆ. ಸುಳ್ಳು ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟು ಮಾನಹಾನಿ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ.

ಮತಾಂತರ ಆರೋಪ: ಫೆ.೨೨ರಂದು ಸಂಜೆ ಆರೋಗ್ಯ ಕೇಂದ್ರದ ವಸತಿ ನಿಲಯದಲ್ಲಿನ ಕೋಣೆಯಲ್ಲಿ ಅಕ್ಕಪಕ್ಕದವರನ್ನು ಕೂಡಿಸಿಕೊಂಡು ಯೇಸುಕ್ರಿಸ್ತನ ಆರಾಧನೆ ಮಾಡಿ, ಒಂದು ಧರ್ಮದ ಬೋಧನೆ, ಮತಾಂತರ ನಡೆಸಲಾಗುತ್ತಿದೆ ಎಂದು ಹಿಂದೂ ಜಾಗೃತಿ ಸೇನೆಯ ಕಾರ್ಯಕರ್ತರು ಆರೋಪಿಸಿದ್ದರು. ಆರಾಧನೆ ನಡೆಸುವ ವೇಳೆ ಸ್ಥಳಕ್ಕೆ ಹೋಗಿ ಬೈಪ್ ಠಣೆ, ಭಜನೆಗೆ ಅಡ್ಡಿ ಪಡಿಸಿ, ಸರ್ಕಾರಿ ಕ್ಷೇಮ ಕೇಂದ್ರದ ಕಟ್ಟಡದಲ್ಲೇ ಕ್ವಾಟರ್ಸ್ ಇದ್ದು, ಅನ್ಯ ಧರ್ಮದವರನ್ನು ಸೇರಿಸಿ ಭಜನೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದರು. ಮತಾಂತರ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು.