ಬಳ್ಳಾರಿ : ಪ್ರಾಚೀನ ಕಾಲದಿಂದ ಹಿಡಿದು ಇಂದಿನವರೆಗೂ ಭಾಷೆಗಳಲ್ಲಿ ಕೊಡು ಕೊಳ್ಳುವಿಕೆ ನಿರಂತರವಾಗಿ ನಡೆದಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ತೆಲುಗಿನ ಲೇಖಕ ಡಾ. ಪತ್ತಿಪಾಕ ಮೋಹನ್ ಅಭಿಪ್ರಾಯಪಟ್ಟರು.
ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಘಟಕದಿಂದ ಮಂಗಳವಾರ ಆಯೋಜಿಸಿದ್ದ ಭಾಷಾ ಬಾಂಧವ್ಯ ಕುರಿತು ನಡೆದ ಮಾತುಕತೆಯಲ್ಲಿ ಭಾಗವಹಿಸಿ ಮಾತನಾಡಿದರು. ತೆಲುಗಿನ ವೈವಿಧ್ಯಮಯ ಸಾಹಿತ್ಯವು ಅನುವಾದದ ಮೂಲಕ ಕನ್ನಡಕ್ಕೆ ಬಂದು ಹೊಸ ಸಂವೇದನೆಯನ್ನು ರೂಪಿಸಿದೆ. ಹೊಸ ಓದುಗರನ್ನು ಸೃಷ್ಟಿಸಿದೆ ಎಂದರು. ನಾನು ಕವಿ, ಲೇಖಕ ಎನ್ನುವದಕ್ಕಿಂತ ಒಬ್ಬ ಸಂವೇದನಾಶೀಲ ಮನುಷ್ಯ ಎಂದು ಗುರುತಿಸಿಕೊಳ್ಳುವುದು ನನಗಿಷ್ಟ ಎಂದರು . ಕನ್ನಡದಲ್ಲಿ ಇರುವ ಹಾಗೆ ತೆಲುಗಿನ ಸಾಹಿತ್ಯದಲ್ಲೂ ಅನೇಕ ವಾದಗಳಿವೆ. ಪ್ರಧಾನವಾಗಿ ನನ್ನ ಮೇಲೆ ಎಡಪಂಥೀಯ ಚಿಂತನೆ, ಸ್ತ್ರೀವಾದ ತುಂಬಾ ಪ್ರಭಾವ ಬೀರಿದೆ ಎಂದು ತಮ್ಮ ಅನುಭವ ಲೋಕವನ್ನು ತೆರೆದಿಟ್ಟರು. ವರ್ತಮಾನ ಕಾಲದಲ್ಲಿ ಭಾಷೆ ಮೀರಿ ಸಾಹಿತ್ಯದ ಮೂಲಕ ನಾವುಗಳೆಲ್ಲಾ ಒಂದಾಗಬೇಕಿದೆ. ಈ ಒಳಗೊಳ್ಳುವಿಕೆಗೆ ಇಂಥ ಕಾರ್ಯಕ್ರಮಗಳು ಅತ್ಯಗತ್ಯ ಎಂದರು.
ಕಸಾಪ ಜಿಲ್ಲಾದ್ಯಕ್ಷ ಡಾ. ನಿಷ್ಠಿ ರುದ್ರಪ್ಪ ಮಾತನಾಡಿ, ಸದ್ಯದ ದಿನಮಾನದಲ್ಲಿ ಬರಹಗಾರರ ಮೇಲೆ ಬಹುದೊಡ್ಡ ಸಾಮಾಜಿಕ ಹೊಣೆಗಾರಿಕೆ ಇದೆ. ಮಾತೃಭಾಷೆಯನ್ನು ಅಲಕ್ಷಿಸಿ ಇನ್ನೊಂದು ಭಾಷೆಯನ್ನು ಕಲಿಯುವುದು ಕಷ್ಟ. ಯಾವುದೇ ಭಾಷೆ ಸಾಹಿತ್ಯ, ಸಾಂಸ್ಕೃತಿಕ , ಸಾಮಾಜಿಕ ಬಾಂಧವ್ಯವನ್ನು ಬೆಸೆಯುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ ಎಂದರು.
ಪ್ರಮುಖರಾದ ರಾಮಾಂಜನೇಯುಲು, ನೇತಿ ರಘುರಾಮ್, ವೀರೇಂದ್ರ ರಾವಿಹಾಳ, ಅಜಯ ಬಣಕಾರ, ಕೆ. ವಿ. ನಾಗರೆಡ್ಡಿ ಅಹಿರಾಜ್ ಇದ್ದರು.