ಹಾಸನ: ಕೇಂದ್ರ ಸರ್ಕಾರ ಘೋಷಿಸಿರುವ ಹಿಂದಿ ದಿವಸ್ ವಿರೋಧಿಸಿ, ಆಡಳಿತದಲ್ಲಿ ಹಿಂದಿ ಭಾಷೆ ಹೇರುತ್ತಿರುವ ಕೇಂದ್ರ-ರಾಜ್ಯ ಸರ್ಕಾರದ ನೀತಿಯನ್ನು ಕೂಡಲೇ ವಾಪಸ್ ಪಡೆಯುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಬುಧವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಸೆ.14ನ್ನು ಹಿಂದಿ ದಿವಸ್ ಎಂದು ಆಚರಿಸಲು ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಗೆ ಕರ್ನಾಟಕ ಸರ್ಕಾರ ಸಹ ಬೆಂಬಲ ವ್ಯಕ್ತಪಡಿಸಿರುವುದು ಖಂಡನೀಯ. ಭಾರತಕ್ಕೆ ಯಾವುದೇ ರಾಷ್ಟ್ರೀಯ ಭಾಷೆ ಇಲ್ಲ. ದೇಶದ 22 ಭಾಷೆಗಳಿಗೆ ರಾಷ್ಟ್ರೀಯ ಸ್ಥಾನಮಾನ ನೀಡಿರುವುದು ಸಂವಿಧಾನದಲ್ಲೇ ಇದೆ. ಹಾಗೆಯೇ ಪ್ರತಿ ರಾಜ್ಯ ಸರ್ಕಾರ ಆಡಳಿತ ಭಾಷೆಯಾಗಿ ತನ್ನ ಮಾತೃಭಾಷೆಯನ್ನೇ ಬಳಸಬೇಕು ಹಾಗೂ ಕಡ್ಡಾಯವಾಗಿ ಅಲ್ಲಿನ ಮಕ್ಕಳಿಗೆ ಮತ್ತು ನಾಗರಿಕರಿಗೆ ಶಿಕ್ಷಣದಲ್ಲಿ, ಸಾರ್ವತ್ರಿಕವಾಗಿ ಮಾತೃಭಾಷೆಗೆ ಒತ್ತು ನೀಡಿ ಪ್ರೋತ್ಸಾಹಿಸಬೇಕೆಂದು ತಿಳಿಸಲಾಗಿದೆ. ಆದರೆ ಕೇಂದ್ರ ಸರ್ಕಾರ ಹಿಂದಿ ಮೋಹದಿಂದಾಗಿ ರಾಷ್ಟ್ರದ ಎಲ್ಲಾ ರಾಜ್ಯಗಳ ಮೇಲೆ ಹಿಂದಿಯನ್ನು ಹೇರುತ್ತಿರುವುದು ಭಾರತದ ಒಕ್ಕೂಟ ವ್ಯವಸ್ಥೆಗೆ ಮಾಡಿರುವ ಮೋಸ ಎಂದು ದೂರಿದರು.
ಈ ನಡೆ ರಾಜ್ಯಗಳ ಸಾರ್ವಭೌಮತ್ವ ಪ್ರಶ್ನಿಸುವಂತಿದೆ. ಸಂವಿಧಾನದಲ್ಲಿಯೇ ಇಲ್ಲದ ವಿಷಯಗಳನ್ನು ಸರ್ಕಾರ ಜನರ ಮೇಲೆ ಹೇರುತ್ತಿರುವುದು ಅಸಂವಿಧಾನಿಕ ಮತ್ತು ಸಂವಿಧಾನದ ಸ್ಪಷ್ಟ ಉಲ್ಲಂಘನೆ ಎಂದು ಕಿಡಿ ಕಾರಿದರು.
ಕೇಂದ್ರ ಸರ್ಕಾರ ಘೋಷಿಸಿರುವ ಹಿಂದಿ ದಿವಸ್ ಎಂಬ ಅಸಂವಿಧಾನಿಕ ವಿಚಾರಕ್ಕೆ ಬೆಂಬಲ ನೀಡದೆ ಹಿಂದಿಯನ್ನು ಕನ್ನಡಿಗರ ಮೇಲೆ ಹೇರಬೇಕೆಂಬ ನಿಲುವು ದೂರವಿಟ್ಟು ಕನ್ನಡಿಗರ ಸಾರ್ವಭೌಮತ್ವ ಎತ್ತಿ ಹಿಡಿಯಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಸರ್ಕಾರಗಳು ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದರು. ಸಂಘಟನೆಯ ಜಿಲ್ಲಾಧ್ಯಕ್ಷ ಎಂ.ಕೆ.ಆರ್. ಸೋಮೇಶ್, ಯೋಗೇಶ್, ತಾಲೂಕು ಅಧ್ಯಕ್ಷ ಕಿರಣ್, ವಿದ್ಯಾರ್ಥಿ ಘಟಕದ ಶ್ರೇಯಸ್, ಧನುಷ್, ವಿಷ್ಣು, ಸುದರ್ಶನ್, ದೀಪಕ್, ವಿಜಿಕುಮಾರ್, ವಿವೇಕ್ ಗೌಡ ಮೊದಲಾದವರಿದ್ದರು.