ಜಿಲ್ಲೆ

ಹಿಂದಿ ದಿವಸ್ ಆಚರಣೆ ಆದೇಶ ಹಿಂಪಡೆಯಿರಿ, ಕರವೇ ಪದಾಧಿಕಾರಿಗಳ ಪ್ರತಿಭಟನೆ ಸರ್ಕಾರದ ವಿರುದ್ಧ ಆಕ್ರೋಶ

ನೆಲಮಂಗಲ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹಿಂದಿ ದಿವಸ್ ಆಚರಣೆ ಆದೇಶ ಕೈಬಿಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ (ಶಿವರಾಮೇಗೌಡರ ಬಣ) ವೇದಿಕೆ ತಾಲೂಕು ಸಮಿತಿ ಪದಾಧಿಕಾರಿಗಳು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಗರದ ಸಾರ್ವಜನಿಕ ಆಸ್ಪತ್ರೆ ಆವರಣದ ನೇತಾಜಿ ಉದ್ಯಾನವನದಲ್ಲಿ ಮಂಗಳವಾರ ಸಮಾವೇಶಗೊಂಡ ವೇದಿಕೆ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಸರ್ಕಾರದ ವಿರುದ್ಧ ೊಷಣೆ ಕೂಗಿ ಆಕ್ರೋಶವ್ಯಕ್ತಪಡಿಸಿ, ಪ್ರತಿಭಟನಾ ಮೆರವಣಿಗೆ ತೆರಳಿದರು.

ಕೇಂದ್ರ ಸರ್ಕಾರ ಸೆ.14ರಂದು ದೇಶದಾದ್ಯಂತ ಹಿಂದಿ ದಿವಸ್ ಆಚರಣೆ ಮಾಡುವಂತೆ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಕರವೇ ಕಾರ್ಯಕರ್ತರು ಸೆ.14ರಂದು ಕರಾಳ ದಿನವಾಗಿ ಆಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದ ಹೋರಾಟಗಾರರು, ಹಿಂದಿ ಪೊಸ್ಟರ್ ಸುಟ್ಟು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ಆದೇಶ ಹಿಂಪಡೆಯುವಂತೆ ತಹಸೀಲ್ದಾರ್ ಕೆ.ಮಂಜುನಾಥ್‌ಗೆ ಮನವಿ ಸಲ್ಲಿಸಿದರು.

ಕರವೇ ತಾಲೂಕು ಅಧ್ಯಕ್ಷ ಸುರೇಶ್ ಮಾತನಾಡಿ, ದೇಶದಾದ್ಯಂತ ನೂರಾರು ಭಾಷೆಗಳಿದ್ದು, ಸೆ.14ರಂದು ಕೇಂದ್ರ ಸರ್ಕಾರ ಹಿಂದಿ ದಿವಸ್ ಆಚರಣೆಗೆ ಆದೇಶ ಮಾಡಿರುವುದು ಬೇಸರದ ಸಂಗತಿ. ರಾಜ್ಯದಲ್ಲಿ ಬಲವಂತವಾಗಿ ಹಿಂದಿ ದಿವಸ್ ಆಚರಣೆ ಮಾಡುವಂತೆ ಕನ್ನಡಿಗರಿಗೆ ಒತ್ತಾಯ ಹೇರುತ್ತಿದ್ದಾರೆ. ಎರಡೂವರೆ ಸಾವಿರ ವರ್ಷಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ ಕನ್ನಡ ಭಾಷೆಯನ್ನು ಕೇಂದ್ರ ಸರ್ಕಾರ ಕಡೆಗಣಿಸುತ್ತಿರುವುದು ಸಮಂಜಸವಲ್ಲ ಎಂದರು.

ಅಲ್ಪಸಂಖ್ಯಾತರ ಘಟಕ ತಾಲೂಕು ಅಧ್ಯಕ್ಷ ರೆಹಮಾನ್, ವಿದ್ಯಾರ್ಥಿ ಘಟಕ ತಾಲೂಕು ಅಧ್ಯಕ್ಷ ಮಂಜುನಾಥ್‌ಗೌಡ, ಸಮರ ಸೇನೆ ತಾಲೂಕು ಅಧ್ಯಕ್ಷ ಪುಟ್ಟರಾಜು, ಕಸಾಪ ತಾಲೂಕು ಅಧ್ಯಕ್ಷ ಸಿ.ಕೇಶವಮೂರ್ತಿ, ಮುಖಂಡರಾದ ರವಿಕುಮಾರ್, ಉಮೇಶ್, ಆಕಾಶ್, ಕಿರಣ್, ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು.