ವಿರಾಜಪೇಟೆ: ಕೇಂದ್ರ ಸರ್ಕಾರ ಸೆ.14 ರಂದು ಹಿಂದಿ ದಿವಸ್ ಆಚರಣೆ ಮಾಡುತ್ತಿರುವುದನ್ನು ಖಂಡಿಸಿ ಜೆಡಿಎಸ್ ತಾಲೂಕು ಘಟಕದ ವತಿಯಿಂದ ಗಡಿಯಾರ ಕಂಬದ ಬಳಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಕೇಂದ್ರ ಸರ್ಕಾರದ ವಿರುದ್ಧ ಘೊಷಣೆ ಕೂಗಿ ತಹಸೀಲ್ದಾರ್ ಅರ್ಚನಾ ಭಟ್ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ತಹಸೀಲ್ದಾರ್ ಮೇಲಧಿಕಾರಗಳ ಮೂಲಕ ಸರ್ಕಾರಕ್ಕೆ ಕಳುಹಿಸಿ ಕೊಡಲಾಗುವದು ಎಂದು ಹೇಳಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಪಿ.ಎ.ಮಂಜುನಾಥ್ ಮಾತನಾಡಿ, ಕೇಂದ್ರ ಸರ್ಕಾರ ಕುತಂತ್ರದಿಂದ ಸೆಪ್ಟೆಂಬರ್ 14ನ್ನು ಹಿಂದಿ ದಿವಸ ಎಂಬ ಆಚರಣೆಯನ್ನು ಸೃಷ್ಟಿಸಿ ದೇಶದ ಸಾವಿರಾರು ಭಾಷೆಗೆ ಮೋಸ ಮಾಡುತ್ತ ಬಂದಿದೆ. ಕೇವಲ 400 ವರ್ಷಗಳ ಇತಿಹಾಸ ಇರುವ ಹಿಂದಿ ಭಾಷೆಯನ್ನು ಪ್ರೋತ್ಸಾಹಿಸುತ್ತಿರುವ ಕೇಂದ್ರ ಸರ್ಕಾರ 2500 ವರ್ಷ ಇತಿಹಾಸ ಇರುವ ಕನ್ನಡ ಭಾಷೆಯನ್ನು ಕಡೆಗಣಿಸುತ್ತಿದೆ. ಹತ್ತಾರು ಭಾಷೆಗಳ ತವರೂರಾದ ಕನ್ನಡ ಭಾಷೆ ವೈವಿಧ್ಯಮಯ ಸಂಸ್ಕೃತಿ ಹೊಂದಿದೆ. ಇಂತಹ ಪುಣ್ಯಭೂಮಿಯಲ್ಲಿ ಹಿಂದಿ ಭಾಷೆಯನ್ನು ಹೇರುವುದು ಘೋರ ಅನ್ಯಾಯವಾಗಿದೆ ಎಂದು ಕಿಡಿಕಾರಿದರು.
ಹಿಂದಿ ದಿವಸ ಕೇವಲ ಹಿಂದಿ ಭಾಷಿಕ ರಾಜ್ಯಗಳಿಗೆ ಮಾತ್ರ ಸೀಮಿತವಾಗಿರಲಿ. ಬಹು ಭಾಷಿಕ ಭಾರತದ ಮೇಲೆ ಆಡಳಿತಾತ್ಮಕವಾಗಿ ಹಿಂದಿ ಹೇರಲು ಸಂವಿಧಾತ್ಮಕವಾಗಿ ತೊಡಕು ಇರುವುದರಿಂದ ಸರ್ಕಾರ ಹುಸಿ ರಾಷ್ಟ್ರೀಯತೆಯ ಪ್ಯಾಕೇಜಿನಲ್ಲಿ ಹಿಂದಿಯನ್ನು ಹೇರುತ್ತಿದೆ. ಜೊತೆಗೆ ಹಿಂದಿ ಭಾಷೆಯನ್ನು 2ನೇ ಭಾಷೆಯಾಗಿ ಕಲಿಯಬೇಕೆಂದು ಒತ್ತಡ ಹೇರುತ್ತಿರುವುದು ಹಾಸ್ಯಾಸ್ಪದ ಹಾಗೂ ಖಂಡನೀಯ. ಕನ್ನಡ ಪರ ನಾವಿದ್ದೇವೆ ಎಂದು ಹೇಳಿಕೊಳ್ಳುವ ಹಲವಾರು ಕನ್ನಡ ಸಂಘಟನೆಗಳು ಇಂದು ಕನ್ನಡ ಭಾಷೆಗೆ ಧಕ್ಕೆ ಬರುತ್ತಿರುವ ಸಂದರ್ಭ ಮೌನ ವಹಿಸಿರುವುದು ಅನುಮಾನಕ್ಕೆ ಕಾರಣವಾಗಿದೆ. ಕೇವಲ ಅಧಿಕಾರಕ್ಕಾಗಿ ಕನ್ನಡ ಪರ ಹೋರಾಟ ಎಂದು ಬಿಂಬಿಸಿಕೊಂಡಿರುವ ನಾಯಕರು ತಮ್ಮ ಸ್ವಾರ್ಥಕ್ಕಾಗಿ ಕನ್ನಡ ಹಾಗೂ ಸಂಘಟಣೆಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.
ಪ್ರತಿಭಟನೆಯಲ್ಲಿ ಪಂದ್ಯಂಡ ರವಿ ಮಾದಪ್ಪ, ಆಸ್ರಫ್ ಆಲಿ, ಮಜೀದ್, ಅಮ್ಮತ್ತಿ ಜಯ, ಬಾಳೆಕುಟ್ಟಿರ ದಿನಿ, ಸೈಪೂದ್ದಿನ್, ಪಾಣತಲೆ ಸತ್ಯ, ನೂರ್ ಅಹಮದ್, ಹರ್ಷ, ಜುಬೇದ, ಚಿಲ್ಲವಂಡ ಗಣಪ, ಸಕ್ಲೇನ್, ಕಾಣತಂಡ ಬೋಪಣ್ಣ ಮತ್ತಿತರರು ಉಪಸ್ಥಿತರಿದ್ದರು.