ದಾವಣಗೆರೆ: ಪ್ರಚೋದನಾಕಾರಿ ಭಾಷಣದ ಸುಳ್ಳು ಆರೋಪದಡಿ ಹಿಂದು ಜಾಗರಣ ವೇದಿಕೆ ಪ್ರಾಂತ ಸಹ ಸಂಯೋಜಕ ದಾವಣಗೆರೆಯ ಸತೀಶ್ ಪೂಜಾರಿ ಅವರನ್ನು ಬಂಧಿಸಿದ ಪೊಲೀಸರ ಕ್ರಮ ಖಂಡಿಸಿ ಸಂಘಟನೆಯ ಜಿಲ್ಲಾ ಘಟಕದಡಿ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಜಯದೇವ ವೃತ್ತದಿಂದ ಮೆರವಣಿಗೆ ನಡೆಸಿದ ಬಿಜೆಪಿ ಹಾಗೂ ಸಂಘಟನೆ ಮುಖಂಡರು, ಕಾರ್ಯಕರ್ತರು ಪಾಲಿಕೆ ಸಮೀಪದ ವೃತ್ತದಲ್ಲಿ ಮಾನವ ಸರಪಳಿ ರಚಿಸಿದರು. ನಂತರ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಅಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಆ.14ರಂದು ಆಯೋಜಿಸಿದ್ದ ಅಖಂಡ ಭಾರತ ಸಂಕಲ್ಪ ಕಾರ್ಯಕ್ರಮದಲ್ಲಿ ಸತೀಶ್ ಪೂಜಾರಿ ದಿಕ್ಸೂಚಿ ಭಾಷಣ ಮಾಡಿದ್ದರು. ಅದು ಪ್ರಚೋದನಾಕಾರಿಯಾಗಿದೆ ಎಂದು ಸುಳ್ಳು ಆರೋಪ ಹೊರಿಸಿದ ಅಲ್ಲಿನ ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿದ್ದಾರೆ.
ಅಲ್ಲದೆ ಯಾವುದೇ ನೋಟಿಸ್ ನೀಡದೆಯೇ, ಮಧ್ಯರಾತ್ರಿ ಸತೀಶ್ ಪೂಜಾರಿಯ ದಾವಣಗೆರೆ ನಿವಾಸಕ್ಕೆ ನುಗ್ಗಿ ಬಂಧಿಸಲಾಗಿದೆ. ಮನೆಯವರನ್ನು ಅವಾಚ್ಯವಾಗಿ ನಿಂದಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿಂದು ವಿರೋಧಿ ನೀತಿಗೆ ಈ ಪ್ರಕರಣ ಕೈಗನ್ನಡಿಯಾಗಿದೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ದೇಶ ಮತ್ತು ಸಮಾಜದಲ್ಲಿ ನಡೆಯುತ್ತಿರುವ ಸತ್ಯ ಸಂಗತಿಗಳನ್ನು ಹಿಂದು ಜಾಗರಣ ವೇದಿಕೆಯು ಸದಾ ಜನರ ಮುಂದಿಡಲಿದೆ. ಸಾಮಾಜಿಕ, ಹಿಂದು ಸಂಘಟನೆಗಳ ಕಾರ್ಯಕರ್ತರ ಮಾನಸಿಕ ಮನೋಬಲ ದಮನಿಸುವ ಪ್ರಯತ್ನಗಳನ್ನು ದುಷ್ಟ ಶಕ್ತಿಗಳು ಮಾಡುತ್ತಿದೆ. ಅವರದೇ ಭಾಷೆಯಲ್ಲಿ ಉತ್ತರ ಕೊಡುವ ಸಾಮರ್ಥ್ಯ ಸಂಘಟನೆಗಿದೆ. ಇನ್ನು ಮುಂದೆ ಸಂಘಟನೆಯ ಕಾರ್ಯಕರ್ತರನ್ನು ಕೆಣಕಿದರೆ, ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಪ್ರಯತ್ನ ನಡೆದಲ್ಲಿ ತಕ್ಕ ಉತ್ತರ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಮುಖಂಡರಾದ ಡಾ.ಎ.ಎಚ್. ಶಿವಯೋಗಿಸ್ವಾಮಿ, ಯಶವಂತರಾವ್ ಜಾಧವ್, ಎಸ್.ಟಿ.ವೀರೇಶ್, ರಾಜನಹಳ್ಳಿ ಶಿವಕುಮಾರ್, ವೈ.ಮಲ್ಲೇಶ್, ಕೆ.ಎಂ.ಸುರೇಶ್, ಪ್ರಸನ್ನಕುಮಾರ್, ಮಂಜಾನಾಯ್ಕ, ಶಿವಾನಂದ್, ವೀರೇಶ್ ಪೈಲ್ವಾನ್, ಆರ್.ಎಲ್. ಶಿವಪ್ರಕಾಶ್, ಶ್ರೀನಿವಾಸ ದಾಸಕರಿಯಪ್ಪ, ಹಿಂದೂ ಜಾಗರಣ ವೇದಿಕೆ ಮುಖಂಡರಾದ ಈರಣ್ಣ, ಶಿವಾಜಿ, ಗಿರೀಶ್, ಶ್ರೀನಿವಾಸ್, ಮಲ್ಲಿಕಾರ್ಜುನ, ಗಣೇಶ್ ಇತರರಿದ್ದರು.