ಜಿಲ್ಲೆ

ಹಿಂಜರಿದರೆ ನಿರ್ದಾಕ್ಷಿಣ್ಯ ಕ್ರಮ

ಧಾರವಾಡ: ಕೋವಿಡ್-19 ನಿಯಂತ್ರಣಕ್ಕೆ ಸರ್ಕಾರಿ ಆಸ್ಪತ್ರೆಗಳೊಂದಿಗೆ ಖಾಸಗಿ ಆಸ್ಪತ್ರೆಗಳೂ ಕೈ ಜೋಡಿಸಬೇಕು. ಈ ನಿಟ್ಟಿನಲ್ಲಿ ಖಾಸಗಿ ವೈದ್ಯರಿಗೆ ಸಹಕಾರ ನೀಡಲು ಕೋರಿಕೊಳ್ಳಲಾಗುವುದು. ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆಯಡಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಜಿಲ್ಲಾಧಿಕಾರಿಗೆ ಸೂಚಿಸಿದರು.

ಖಾಸಗಿ ಆಸ್ಪತ್ರೆಗಳು ಈ ಕಠಿಣ ಸಂದರ್ಭದಲ್ಲಿ ತಮ್ಮ ಜವಾಬ್ದಾರಿಯಿಂದ ಹಿಂದೆ ಸರಿಯಬಾರದು ಎಂದರು.

ವಿವಿಧ ಇಲಾಖೆಗಳ ಅಧಿಕಾರಿಗಳು ಜನರು ಅನಗತ್ಯವಾಗಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ವಾಟ್ಸ್​ಆಪ್, ಫೋನ್ ಹಾಗೂ ಇ-ಮೇಲ್ ಮೂಲಕ ಸ್ಪಂದನೆ ನೀಡಬೇಕು ಎಂದರು.

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮಾಸ್ಕ್ ಬಳಕೆ ಮಾಡದಿರುವವರಿಂದ ಈವರೆಗೆ 12 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ. ಹು-ಧಾ ಮಹಾನಗರ ಪಾಲಿಕೆ 3,19,000 ರೂ., ಮಹಾನಗರ ಪೊಲೀಸ್ ಆಯುಕ್ತಾಲಯ 6 ಲಕ್ಷ ರೂ. ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವ್ಯಾಪ್ತಿಯಲ್ಲಿ 3,65,000 ರೂ. ದಂಡ ಸಂಗ್ರಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಆನ್​ಲೈನ್​ನಲ್ಲಿ ಚಿಕಿತ್ಸೆ ನೀಡಲು ಅವಕಾಶ ನೀಡಿ

ಹುಬ್ಬಳ್ಳಿ: ಕರೊನಾ ಹಿನ್ನೆಲೆಯಲ್ಲಿ ಸಾಮಾನ್ಯ ಕಾಯಿಲೆಯ ರೋಗಿಗಳಿಗೆ ವಾಟ್ಸ್​ಆಪ್ ಹಾಗೂ ಎಸ್​ಎಂಎಸ್ ಸಂದೇಶದ ಮೂಲಕ ಚಿಕಿತ್ಸೆ ನೀಡಲು ವೈದ್ಯರಿಗೆ ಅನುಮತಿ ನೀಡಬೇಕೆಂದು ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಶಾಕಿರ ಸನದಿ ಆಗ್ರಹಿಸಿದ್ದಾರೆ.

ಈ ಕುರಿತು ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ಆರೋಗ್ಯ ಸೇತು ಆಪ್​ನಲ್ಲಿ ಬದಲಾವಣೆ ತಂದು ಜನರು ಸರಳವಾಗಿ ಸಮೀಪದ ಖಾಸಗಿ ಅಥವಾ ಸರ್ಕಾರಿ ವೈದ್ಯರನ್ನು ಸಂರ್ಪಸಿ ಯಾವ ಔಷಧ, ಎಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಲು ಅನುಮತಿ ನೀಡಬೇಕು. ಆನ್​ಲೈನ್​ನಲ್ಲಿ ತರಗತಿಗಳು, ವಿಡಿಯೋ ಕಾನ್ಪರೆನ್ಸ್​ನಲ್ಲಿ ಕೋರ್ಟ್ ಕಲಾಪಗಳು ನಡೆಯುತ್ತಿರುವಾಗ ವೈದ್ಯಕೀಯ ಚಿಕಿತ್ಸೆ ಆನ್​ಲೈನ್​ನಲ್ಲಿ ಏಕಿಲ್ಲ ಎಂದು ಪ್ರಶ್ನಿಸಿದ್ದಾರೆ.

ಕರೊನಾದಿಂದ ಅಥವಾ ಬೇರೆ ಯಾವುದೇ ರೋಗದಿಂದ ಮೃತಪಟ್ಟವರನ್ನು ಕರೊನಾದಿಂದ ಸತ್ತಿರಬಹುದೆಂದು ಶಂಕಿಸಿ ಮೃತದೇಹಗಳನ್ನು ಕುಟುಂಬದವರಿಗೆ ಕೊಡದೇ ಅಮಾನವೀಯವಾಗಿ ಅಂತಿಮ ಸಂಸ್ಕಾರ ಮಾಡಿರುವುದು ತಿಳಿದುಬಂದಿದೆ. ನಾಗರಿಕ ಸಮಾಜಕ್ಕೆ ಮಾಡಿರುವ ಅವಮಾನ ಇದು. ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಅಂತಿಮ ಸಂಸ್ಕಾರಕ್ಕೆ ವಿನೂತನ ಕ್ರಮ ಅನುಸರಿಸಲು ಸಲಹೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಕೋವಿಡ್ ಪರೀಕ್ಷೆ ಸಂಖ್ಯೆಯಲ್ಲಿ ಹೆಚ್ಚಳ

ಹುಬ್ಬಳ್ಳಿ: ಜಿಲ್ಲಾಧಿಕಾರಿ ಸೇರಿ ಜಿಲ್ಲೆಯ ಪ್ರಮುಖ ಅಧಿಕಾರಿಗಳೊಂದಿಗೆ ಕರೊನಾ ನಿಯಂತ್ರಣದ ಕುರಿತು ರ್ಚಚಿಸಿದ್ದೇನೆ. ಜಿಲ್ಲೆಯಲ್ಲಿ ಕರೊನಾ ಪರೀಕ್ಷೆ ಸಂಖ್ಯೆ ಹೆಚ್ಚಿಸಲಾಗುತ್ತಿದೆ. ಹಾಗಾಗಿ, ಲಕ್ಷಣಗಳಿಲ್ಲದ ಹಲವರಲ್ಲಿ ಸೋಂಕು ಪತ್ತೆಯಾಗುತ್ತಿವೆ. ಅದೇ ರೀತಿ ಗುಣವಾಗುವವರ ಸಂಖ್ಯೆಯೂ ಹೆಚ್ಚಳವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಈಗಾಗಲೇ ಸಚಿವ ಸಂಪುಟ ಉಪಸಮಿತಿ ಮಾಡಿ ಸಂಪೂರ್ಣ ಉಸ್ತುವಾರಿ ವಹಿಸಿಕೊಟ್ಟಿದ್ದಾರೆ. ಜನರು ಹೆಚ್ಚು ಜಾಗರೂಕತೆಯಿಂದ ಇರಬೇಕು. ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಗಾಬರಿಯಾಗುವ ಅಗತ್ಯವಿಲ್ಲ ಎಂದರು.

ದೇಶದಲ್ಲಿ ಸಮುದಾಯಕ್ಕೆ ಹರಡಿಲ್ಲ. 130 ಕೋಟಿಯಲ್ಲಿ 7 ಲಕ್ಷ ಜನರಿಗೆ ಮಾತ್ರ ಬಂದಿದೆ. ಕರೊನಾ ಒಂದು ದೊಡ್ಡ ಕಂಟಕ. ನಮ್ಮನ್ನು ನಾವು ಸಂರಕ್ಷಿಸಿಕೊಳ್ಳಲು ಪಣ ತೊಡಬೇಕು ಎಂದರು.

EndFragment