ಜಿಲ್ಲೆ

ಹಾಸ್ಯನಟ ಟಿ.ಎನ್.ಬಾಲಕೃಷ್ಣರಿಗೆ ನುಡಿನಮನ

ಮೈಸೂರು: ದ್ರಾವಿಡ ಪಿಳ್ಳೆ ರಾಮಮಂದಿರ ಟ್ರಸ್ಟ್‌ನಿಂದ ಅ.30ರಂದು ಹಾಸ್ಯನಟ ಟಿ.ಎನ್.ಬಾಲಕೃಷ್ಣ ಅವರ 27ನೇ ಪುಣ್ಯತಿಥಿ ನೆನಪಿನಲ್ಲಿ ನುಡಿನಮನ ಕಾರ್ಯಕ್ರಮ ಆಯೋಜಿಸಲಾಗಿದೆ.
ನಗರದ ಪುರಭವನದಲ್ಲಿ ಸಂಜೆ 4.30ಕ್ಕೆ ಆಯೋಜಿಸಿರುವ ಕಾರ್ಯಕ್ರಮಕ್ಕೆ ಪ್ರತಾಪಸಿಂಹ ಚಾಲನೆ ನೀಡಲಿದ್ದಾರೆ. ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಯಾಗಿ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್, ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ವೈದ್ಯ ಡಾ.ಎಚ್.ಪಿ.ಶೋಭಾ, ನಗರಪಾಲಿಕೆ ಸದಸ್ಯ ಕೆ.ಜೆ.ರಮೇಶ್, ಮುಖಂಡರಾದ ನರಸಿಂಹಮೂರ್ತಿ, ಎಂ.ಪ್ರಕಾಶ್ ಇತರರು ಭಾಗವಹಿಸಲಿದ್ದಾರೆ ಎಂದು ಟ್ರಸ್ಟ್ ನಿರ್ದೇಶಕ ಎಂ.ಪುಟ್ಟಮಹದೇವಪ್ಪ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕನ್ನಡ ಚಿತ್ರರಂಗದಲ್ಲಿ ಟಿ.ಎನ್.ಬಾಲಕೃಷ್ಣ ಅವರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದರೂ ಅವರನ್ನು ಸ್ಮರಿಸುತ್ತಿಲ್ಲ. ಹೀಗಾಗಿ, ಅವರ ಪುಣ್ಯತಿಥಿ ಅಂಗವಾಗಿ ಈ ನೆನಪಿನ ಕಾರ್ಯಕ್ರಮ ಆಯೋಜಿಸಲಾಗಿದೆ. ಅವರ ನೆನಪಿನಾರ್ಥ ಗಿಡ ನೆಡುವ, ಜತೆಗೆ ಬಾಲಕೃಷ್ಣ ಅವರ ಆಯ್ದ ಚಲನಚಿತ್ರಗಳ ದೃಶ್ಯಗಳನ್ನು ಎಲ್‌ಇಡಿ ಪರದೆಯಲ್ಲಿ ಪ್ರದರ್ಶಿಸಲಾಗುವುದು ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ಟ್ರಸ್ಟ್ ಸದಸ್ಯರು ಹಾಗೂ ಮಾತಾ ಸುಗಮ ಸಂಗೀತ ಕಲಾ ವೃಂದವರಿಂದ ಭಕ್ತಿಗೀತೆ, ಚಿತ್ರಗೀತೆಗಳ ಗಾಯನವನ್ನು ಏರ್ಪಡಿಸಲಾಗಿದೆ. ಮಹಾನ್ ನಟನ ಹೆಸರಿನಲ್ಲಿ ನಗರದ ಯಾವುದಾದರೊಂದು ಉದ್ಯಾನ, ರಸ್ತೆ ಅಥವಾ ವೃತ್ತಕ್ಕೆ ಟಿ.ಎನ್. ಬಾಲಕೃಷ್ಣ ಅವರ ಹೆಸರಿಡಬೇಕು ಎಂದು ಒತ್ತಾಯಿಸಿದರು.
ಟ್ರಸ್ಟ್‌ನ ಕೆ.ಬಿ.ಪ್ರೇಮಕುಮಾರಿ, ಜಿ.ಪಾರ್ಥಸಾರಥಿ, ಗೀತಾ ಶ್ರೀಧರ್, ಕೆ.ಪ್ರಸನ್ನ ಚಕ್ರವರ್ತಿ ಇದ್ದರು.