ಚಿತ್ರದುರ್ಗ: ಸಾರಿಗೆ, ವಿದ್ಯಾರ್ಥಿ ವೇತನ ಬಿಡುಗಡೆ, ಹಾಸ್ಟೆಲ್ ಸೇರಿ ಅಗತ್ಯ ಶೈಕ್ಷಣಿಕ ಮೂಲ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ವಸತಿ ವ್ಯವಸ್ಥೆ ಕಲ್ಪಿಸದೆ, ವಿದ್ಯಾರ್ಥಿ ವೇತನ ಬಿಡುಗಡೆ ಮಾಡದೆ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಾಜ್ಯದ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡುತ್ತಿದೆ. ಹಿಂದುಳಿದ ವರ್ಗಗಳ ಇಲಾಖೆ ವ್ಯಾಪ್ತಿಯ 1,258 ಹಾಸ್ಟೆಲ್‌ಗಳಲ್ಲಿ 1,68,833 ವಿದ್ಯಾರ್ಥಿಗಳು, ಸಮಾಜ ಕ ಲ್ಯಾಣ ಇಲಾಖೆಯ 1972 ವಸತಿ ನಿಲಯಗಳಲ್ಲಿ 1,87,200 ಮಕ್ಕಳಿಗೆ ಅವಕಾಶ ನೀಡಬಹುದಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು.
ಹಿಂದಿನ 3 ವರ್ಷಗಳಲ್ಲಿ ಅರ್ಜಿ ಸಲ್ಲಿಸಿದ 100 ವಿದ್ಯಾರ್ಥಿಗಳಲ್ಲಿ 40-50 ವಿದ್ಯಾರ್ಥಿಗಳಿಗೆ ವಸತಿ ನಿಲಯಗಳಲ್ಲಿ ಅವಕಾಶ ಸಿಗುತ್ತಿದೆ. ಆದ್ದರಿಂದ ಅರ್ಜಿ ಸಂಖ್ಯೆಗೆ ಅನುಗುಣವಾಗಿ ಆಯಾ ಜಿಲ್ಲೆಗಳಲ್ಲಿ ಹೊಸ ವಸತಿ ನಿಲಯಗಳನ್ನು ಸ್ಥಾಪಿಸಬೇಕು. 4 ತಿಂಗಳಿಂದ ಕಿಟ್‌ಗಳು ಪೂರೈಕೆ ಆಗಿಲ್ಲ. ಶೌಚಗೃಹ ಕೊರತೆ ಅಧಿಕವಾಗಿದೆ ಎಂದರು.
100 ವಿದ್ಯಾರ್ಥಿಗಳು ಇರಬೇಕಾದ ಜಾಗದಲ್ಲಿ 150 ಮಕ್ಕಳಿದ್ದಾರೆ. ಪ್ರತಿ ತಿಂಗಳ ಊಟದ ವೆಚ್ಚ ಪ್ರತಿ ವಿದ್ಯಾರ್ಥಿಗೆ ಕೊಡುತ್ತಿರುವ 1,850 ರೂ.ಮೊತ್ತವನ್ನು ಹೆಚ್ಚಿಸಬೇಕು. ಶಕ್ತಿ ಯೋಜನೆಯಿಂದಾಗಿ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಕರ ದಟ್ಟಣೆ ಅಧಿಕವಾಗಿದ್ದು, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಸರ್ಕಾರ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದರು.
ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನ ಕಡಿತಗೊಳಿಸಲಾಗಿದೆ. ವಿದ್ಯಾಸಿರಿ ಸರಿಯಾಗಿ ಜಮೆಯಾಗುತ್ತಿಲ್ಲ. ರೈತ ವಿದ್ಯಾನಿಧಿ ರದ್ದು ಗೊಳಿಸಲಾಗಿದ್ದು, ಇತರ ವಿದ್ಯಾರ್ಥಿ ವೇತನಗಳನ್ನು ಬಿಡುಗಡೆ ಮಾಡದೆ ಸರ್ಕಾರ ವಿರೋಧಿ ನಡೆ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವೀರ ವನಿತೆ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದಿಂದ ಡಿಸಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಪರಿಷತ್ ವಿಭಾಗೀಯ ಸಂಚಾಲಕ ಗೋಪಿ, ಆದರ್ಶ, ಸಂಜಯ್, ಎಸ್.ಕೆ.ವಿಕಾಸ್, ಧನಂಜಯ್ ಪಟೇಲ್, ಚಂದನಾ, ಚಂದ್ರಕಲಾ, ಕುಬೇರ, ಪ್ರಶಾಂತ್, ಚರಣ್, ಪ್ರೀತಂ, ಅರುಣಕುಮಾರ್, ಪ್ರವೀಣ್ ಬೆಳಗೆರೆ, ಗೌತಮ್ ಇತರರು ಇದ್ದರು.
(ಸಿಟಿಡಿ 30 ಎವಿವಿಪಿ)
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಬಿವಿಪಿ ಕಾರ‌್ಯಕರ್ತರು ಚಿತ್ರದುರ್ಗದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ಗೋಪಿ, ಆದರ್ಶ, ಪ್ರಶಾಂತ್, ಚರಣ್, ಪ್ರೀತಂ, ಅರುಣಕುಮಾರ್, ಸಂಜಯ್, ಎಸ್.ಕೆ.ವಿಕಾಸ್ ಇತರರಿದ್ದರು.