ನುಗ್ಗೇಹಳ್ಳಿ: ಸೋಲಿಗ ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಹೊಂದಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಸ್ಟೆಲ್‌ಗಳ ವ್ಯವಸ್ಥೆ ಕಲ್ಪಿಸಬೇಕು ಎಂದು ಕರ್ನಾಟಕ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ತಿಳಿಸಿದರು.
ಹೋಬಳಿಯ ಅಕ್ಕನಹಳ್ಳಿ ಕ್ರಾಸ್ ಗ್ರಾಮ ಪಂಚಾಯಿತಿ ಆವರಣದಲ್ಲಿ ಇತ್ತೀಚೆಗೆ ಆದಿವಾಸಿ ಬುಡಕಟ್ಟು ಸೋಲಿಗ, ಹಂದಿ ಜೋಗಿ ಸಮುದಾಯದ ಕುಂದುಕೊರತೆ ಸಭೆ ಉದ್ಘಾಟಿಸಿ ಮಾತನಾಡಿ, ಶಾಲೆಗಳ ಪ್ರಾರಂಭಕ್ಕೂ ಮೊದಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ಜನಾಂಗದವರು ವಾಸಿಸುವ ಗ್ರಾಮಗಳನ್ನು ಗುರುತಿಸಿ ಅವರ ಮಕ್ಕಳ ಪಟ್ಟಿ ಮಾಡಿ ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರವೇಶ ಪರೀಕ್ಷೆಗಳಿಗೆ ತರಬೇತಿ ಕೊಡಿಸಿ ಗುಣಮಟ್ಟದ ಶಿಕ್ಷಣ ಕೊಡಿಸಬೇಕು ಎಂದು ಸೂಚನೆ ನೀಡಿದರು.
ಈ ಸಮುದಾಯದವರು ಹೊಟ್ಟೆಪಾಡಿಗೆ ಊರೂರು ಅಲೆಯುತ್ತಿರುತ್ತಾರೆ. ಮನೆಗಳಲ್ಲಿ ಓದುವುದಕ್ಕೆ ಅವಕಾಶವಿಲ್ಲದೆ ಶಿಕ್ಷಣ ಪಡೆಯಲು ಸಾಧ್ಯವಾಗದೆ ಬಡತನದಲ್ಲಿ ಬದುಕುತ್ತಿದ್ದಾರೆ. ಈ ಸಮುದಾಯಗಳ ಮಕ್ಕಳಿಗೆ ಹಿಂದುಳಿದ ಇಲಾಖೆಯಿಂದ ಸಹಕಾರ ನೀಡಿದರೆ ಶೈಕ್ಷಣಿಕ ಪ್ರಗತಿ ಸಾಧಿಸಬಹುದು. ಸರ್ಕಾರದ ಯೋಜನೆಗಳು ಅಲೆಮಾರಿ ಬುಡಕಟ್ಟು ಜನಾಂಗದವರಿಗೆ ತಲುಪಿಸಬೇಕು ಎಂದು ತಿಳಿಸಿದರು.
ಅಲೆಮಾರಿ ನಿಗಮದ ಕಾರ್ಯದರ್ಶಿ ಆನಂದ್‌ಕುಮಾರ್, ಸಹಾಯಕ ನಿರ್ದೇಶಕ ಗಿರೀಶ್, ಸಮಾಜ ಕಲ್ಯಾಣ ಇಲಾಖೆ ಮೋಹನ್‌ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ರಾಜಕುಮಾರ್, ಪಿಡಿಒ ಸಂಪತ್‌ರಾಜ್, ಹಂದಿಜೋಗಿ ಸಮುದಾಯದ ತಾಲೂಕು ಕಾರ್ಯದರ್ಶಿ ಕಟ್ಟಿಗೆಹಳ್ಳಿ ನಾಗರಾಜ್, ಸೋಲಿಗ ಸಮುದಾಯದ ಮುಖಂಡ ಮಂಜುನಾಥ್, ಸೊಸಲಗೆರೆ ವೆಂಕಟೇಶ್, ಮೂರ್ತಿ, ಶಿವಯ್ಯ, ನರಸಿಂಹಯ್ಯ, ಶಿವರಾಜ್, ರಂಗಯ್ಯ, ತನುಶ್ರೀ, ದೇವರಾಜ್, ಗ್ರಾಮ ಪಂಚಾಯಿತಿ ನೌಕರರಾದ ರಂಗಸ್ವಾಮಿ, ಮಂಜುನಾಥ್, ಲೀಲಾವತಿ, ನಾಗರಾಜ್ ಇದ್ದರು.