ಕಲಬುರಗಿ: ಸರ್ಕಾರಿ ವಸತಿ ನಿಲಯಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರಿಗೆ ಕನಿಷ್ಠ ೩೧ ಸಾವಿರ ವೇತನ ಪಾವತಿಸಬೇಕು, ಬಾಕಿ ವೇತನ ನೀಡಬೇಕು, ಸೇವಾ ಭದ್ರತೆ ಮತ್ತು ಸಿಬ್ಬಂದಿ ಕಡಿತ ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿ ಧರಣಿ ಅ.೧೬ರಂದು ಸತ್ಯಾಗ್ರಹ ನಡೆಸಲಾಗುವುದು ಎಂದು ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ ತಿಳಿಸಿದರು.
ಅ.೧೬ರಂದು ನಗರದ ಜಗತ್ ವೃತ್ತದಿಂದ ೧೪ ಜಿ¯್ಲೆಗಳ ಹೊರಗುತ್ತಿಗೆ ನೌಕರರು ಪ್ರತಿಭಟನೆ ನಡೆಸಿ ಪ್ರಾದೇಶಿಕ ಆಯುಕ್ತರ ವಿಭಾಗ ಕಚೇರಿವರಿಗೆ ಸಾಗಿ, ಧರಣಿ ನಡೆಸಲಾಗುವುದು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸೂಕ್ತ ವೇತನವಿಲ್ಲದೆ ಹೊರಗುತ್ತಿಗೆ ನೌಕರರ ಕುಟುಂಬಸ್ಥರ ಸ್ಥಿತಿ ಶೋಚನೀಯವಾಗಿದೆ. ಹಿಂದುಳಿದ ವರ್ಗಗಳ ವಸತಿ ನಿಲಯದ ಎಂಟು ತಿಂಗಳ ವೇತನ, ಸಮಾಜ ಕಲ್ಯಾಣ ಇಲಾಖೆ ಐದು ತಿಂಗಳ ವೇತನ ಮತ್ತು ಅಲ್ಪಸಂಖ್ಯಾತ ವಸತಿ ನಿಲಯಗಳ ಹೊರಗುತ್ತಿಗೆ ನೌಕರರ ಎರಡು ತಿಂಗಳ ವೇತನ ಪಾವತಿಸಿಲ್ಲ ಎಂದು ಆರೋಪಿಸಿದರು.
೧೫-೨೦ ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಹೊರಗುತ್ತಿಗೆ ನೌಕರರ ಖಾಯಂ ಸಿಬ್ಬಂದಿ ಬಂದರೆ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಇದನ್ನು ತಪ್ಪಿಸಲು ಸರ್ಕಾರ ಕೂಡಲೇ ೧೦೦ ಮಕ್ಕಳಿಗೆ ೫ ಸಿಬ್ಬಂದಿಯನ್ನು ನೀಡಬೇಕು. ರೊಟ್ಟಿ ಮಾಡುವ ಯಂತ್ರ ಕೊಡುವ ನೆಪದಲ್ಲಿ ನೌಕರರ ಕಡಿತ ತಂತ್ರ ಕೈಬಿಡಬೇಕು ಎಂದು ಒತ್ತಾಯಿಸಿದರು.
ಕಾಶೀನಾಥ ಬಂಡಿ, ಹುಲಿಗೆಪ್ಪ ಚಲುವಾದಿ, ಸೈಯದ್ ಇಸಾಮೋದ್ದಿನ್, ನರಸಮ್ಮ ಕೊಂಡ್ಪಳ್ಳಿ, ನರಸಮ್ಮ ಚಂದನಕೇರಾ, ಪರಶುರಾಮ ಹಡಲಗಿ, ಮೇಘರಾಜ ಕಠಾರೆ, ಗುರುನಂದೇಶ ಕೋಣಿನ ಇತರರಿದ್ದರು.