ಜಿಲ್ಲೆ

ಹಾಸ್ಟೆಲ್ ವಿದ್ಯಾರ್ಥಿನಿಯರಿಗಾಗಿ 'ಸ್ಫೂರ್ತಿ ನಡೆ'

ಮೈಸೂರು: ವಿದ್ಯಾರ್ಥಿನಿಯರು ಗುರಿಇಟ್ಟುಕೊಂಡು ನಿರಂತರ ಅಧ್ಯಯನ ಮಾಡಿದಾಗ ಮಾತ್ರ ಜೀವನದಲ್ಲಿ ಯಶಸ್ವಿಯಾಗಬಹುದು ಎಂದು ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿ ಡಾ.ಪ್ರೇಮ್‌ಕುಮಾರ್ ಸಲಹೆ ನೀಡಿದರು.
ಕುವೆಂಪುನಗರದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮಹಿಳಾ ವಿದ್ಯಾರ್ಥಿನಿಲಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ‘ಸ್ಪೂರ್ತಿನಡೆ’ ಕಾರ್ಯಕ್ರಮದಲ್ಲಿ ವ್ಯಕ್ತಿತ್ವ ವಿಕಸನ ಕುರಿತು ಅವರು ಮಾತನಾಡಿದರು.
ಪೋಷಕರ ಉದ್ದೇಶ ಈಡೇರಬೇಕಾದರೆ ನೀವು ಚೆನ್ನಾಗಿ ಓದಬೇಕು. 5 ವರ್ಷದ ಪರಿಶ್ರಮ ನಿಮ್ಮನ್ನು 50 ವರ್ಷ ಚೆನ್ನಾಗಿಟ್ಟಿರುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿ ಹೆಣ್ಣಿಗೆ ಓದಲೂ ಕೂಡಾ ಸ್ವಾತಂತ್ರವಿರಲಿಲ್ಲ. ಅಂಬೇಡ್ಕರ್ ಸಂವಿಧಾನ ಬರೆದ ಮೇಲೆ ಮಹಿಳೆಯರಿಗೂ ಸೌಲಭ್ಯ, ಹಕ್ಕು, ಸ್ವಾತಂತ್ರ್ಯ ಸಿಕ್ಕದೆ. ಆದ್ದರಿಂದ ಅಂಬೇಡ್ಕರ್ ಅವರನ್ನು ಪೂರ್ವಾಗ್ರಹವಿಲ್ಲದೆ ಅವರ ಚಿಂತನೆಗಳನ್ನು ಓದಿ ತಿಳಿದುಕೊಳ್ಳಬೇಕು ಎಂದರು.
ಜಾಗತಿಕ ಮಟ್ಟದಲ್ಲಿ ಈಗ ಕಂಪ್ಯೂಟರ್ ಮತ್ತು ಇಂಗ್ಲೀಷ್ ಜ್ಞಾನ ಬಹಳ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಜಾಗೃತರಾಗಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ವ್ಯಕ್ತಿತ್ವವನ್ನು ವಿಕಸನ ಮಾಡಿಕೊಳ್ಳಬೇಕು ಎಂದು ಹೇಳಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಿ.ಆರ್. ಮಹೇಶ್ ಮಾತನಾಡಿ ಇತಿಹಾಸವನ್ನು ಓದದವನು ಇತಿಹಾಸವನ್ನು ಸೃಷ್ಟಿಸಲಾರ, ಸ್ವಾಭಿಮಾನ ಮತ್ತು ಸ್ವಾವಲಂಬನೆ ಇಲ್ಲದ ವ್ಯಕ್ತಿ ಬದುಕುವುದಕ್ಕಿಂತ ತಾಯಿಗರ್ಭದಲ್ಲಿಯೇ ಸಾಯುವುದು ಲೇಸು ಎಂದು ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದಾರೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ಸ್ವಾಭಿಮಾನಿಗಳಾಗಬೇಕು. ತಂದೆ ತಾಯಿಗೆ ಗೌರವ ತರಬೇಕು. ಸರ್ಕಾರದ ಸವಲತ್ತುಗಳನ್ನು ಉಪಯೋಗಿಸಿಕೊಂಡು ಜೀವನದಲ್ಲಿ ಯಶಸ್ವಿಯಾಗಬೇಕು ಎಂದರು.
ತಾಲೂಕು ಕಲ್ಯಾಣಾಧಿಕಾರಿ ಎಂ.ಕೆ. ಮೇಘ, ನಿಲಯಪಾಲಕರಾದ ಜಗದೀಶ್‌ಕೋರಿ, ಚಿಕ್ಕವಡ್ಗಲ್, ನಾಗರಾಜ್, ತೇಜಸ್ವಿನಿ, ಮಂಜುಳಾ, ಭಾಗ್ಯಲಕ್ಷ್ಮಿ, ವಸಂತ ಇತರರು ಇದ್ದರು.