ಮೈಸೂರು: ಹಾಸ್ಟೆಲ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ನೇತೃತ್ವದಲ್ಲಿ ಮೈಸೂರು ವಿಶ್ವವಿದ್ಯಾಲಯದ ಕಾನೂನು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ವಿವಿಯ ಕ್ರಾರ್ಫಡ್ ಭವನದ ಮುಂಭಾಗ ಧರಣಿ ನಡೆಸಿದ ವಿದ್ಯಾರ್ಥಿಗಳು, ವಿಶ್ವವಿದ್ಯಾಲಯದಿಂದ ಕಾನೂನು ಕಾಲೇಜು ಪ್ರಾರಂಭವಾಗಿ ಒಂದು ತಿಂಗಳು ಕಳೆದಿದೆ. ಆದರೆ ವಿದ್ಯಾರ್ಥಿಗಳಿಗೆ ಹಾಸ್ಟೆಲ್, ಮೂಲಸೌಕರ್ಯ ಇಲ್ಲದೆ ಹಲವು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ದೂರಿದರು.
ಕಾನೂನು ವಿದ್ಯಾರ್ಥಿಗಳಿಗೆ ಈ ಹಿಂದೆ ವಿಲೇಜ್ ಹಾಸ್ಟೆಲ್‌ನಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ವಿಲೇಜ್ ಹಾಸ್ಟೆಲ್ ಕಟ್ಟಡ ನೆಲಸಮ ಮಾಡಲು ಆದೇಶ ಮಾಡಿರುವುದಾಗಿ ತಿಳಿಸಿ ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಅಲ್ಲಿದ್ದ ವಿದ್ಯಾರ್ಥಿಗಳನ್ನು ಖಾಲಿ ಮಾಡಿಸಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಸಮಸ್ಯೆ ಕುರಿತು ಮೈಸೂರು ವಿವಿ ಕುಲಸಚಿವರ ಗಮನಕ್ಕೂ ತರಲಾಗಿತ್ತು. ಅ.17ರಿಂದ ಹಾಸ್ಟೆಲ್‌ಗೆ ಮರು ದಾಖಲಾತಿ ಮಾಡಿಕೊಂಡು ವಸತಿ, ಊಟದ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಅದು ಈಡೇರಿಲ್ಲ. ಆದ್ದರಿಂದ ತಕ್ಷಣ ಕಾನೂನು ವಿದ್ಯಾರ್ಥಿಗಳನ್ನು ಹಾಸ್ಟೆಲ್‌ಗೆ ಮರು ದಾಖಲಿಸಿಕೊಂಡು ವಸತಿ, ಊಟದ ವ್ಯವಸ್ಥೆ ಕಲ್ಪಿಸಬೇಕು. ಕಾನೂನು ವಿದ್ಯಾರ್ಥಿಗಳಿಗೂ ಮಾನಸಗಂಗೋತ್ರಿ ಆವರಣದೊಳಗೆ ಹಾಸ್ಟೆಲ್ ಒದಗಿಸಿ ಮೂಲಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ವಿದ್ಯಾರ್ಥಿಗಳ ಮನವಿ ಸ್ವೀಕರಿಸಿದ ಕುಲಪತಿ ಪ್ರೊ.ಜಿ.ಹೇಮಂತಕುಮಾರ್, ಒಂದು ದಿನದಲ್ಲಿ ವಿದ್ಯಾರ್ಥಿನಿಲಯ, ಊಟದ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ನಿಲ್ಲಿಸಲಾಯಿತು.
ಎಸ್‌ಎಫ್‌ಐ ಜಿಲ್ಲಾ ಸಂಚಾಲಕ ವಿಜಯ್‌ಕುಮಾರ್, ಮೈಸೂರು ವಿವಿ ಘಟಕದ ಕಾರ್ಯದರ್ಶಿ ವೀರಭದ್ರ ಚ. ಹಿರೇಮಠ್, ನಗರ ಸಮಿತಿ ಕಾರ್ಯದರ್ಶಿ ಡಿ.ಅಭಿ, ಗಿರೀಶ್, ಪ್ರಜ್ವಲ್ ಇತರರು ಇದ್ದರು.