ಜಿಲ್ಲೆ

ಹಾಸ್ಟೆಲ್ ಗಳಿಗೆ ದಿಢೀರ್ ಭೇಟಿ ನೀಡಿದ ಆಯುಕ್ತ ಕೆ.ಎ.ದಯಾನಂದ

ಮೈಸೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಅವುಗಳಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಕ್ರಮ ವಹಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತ ಕೆ.ಎ.ದಯಾನಂದ ತಿಳಿಸಿದರು.
ಇಲಾಖೆ ವ್ಯಾಪ್ತಿಗೆ ಸೇರಿರುವ ವೈದ್ಯಕೀಯ ಕಾಲೇಜಿನ ಮಹಿಳಾ ಹಾಸ್ಟೆಲ್, ಇಂಜಿನಿಯರಿಂಗ್ ಹಾಸ್ಟೆಲ್, ಬೋಗಾದಿಯಲ್ಲಿರುವ ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್‌ಗಳಿಗೆ ಭಾನುವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ಬಳಿಕ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿ ಅವರು ಮಾತನಾಡಿದರು.
ವಿದ್ಯಾಭ್ಯಾಸಕ್ಕಾಗಿ ರಾಜ್ಯದ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳು ನಗರಕ್ಕೆ ಬರುತ್ತಿರುವುದರಿಂದ ಹೆಚ್ಚು ಹಾಸ್ಟೆಲ್‌ಗಳ ಅವಶ್ಯಕತೆ ಇದ್ದು, ಬೋಗಾದಿ ಹಾಸ್ಟೆಲ್‌ನಲ್ಲಿ ಹೆಚ್ಚುವರಿಯಾಗಿ ಕಟ್ಟಡ ನಿರ್ಮಾಣ ಮಾಡಲು 20 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಕೆ.ಆರ್. ನಗರದಲ್ಲಿ ಅರಸು ಭವನದ ಕಾಮಗಾರಿ ಮುಗಿಯುವ ಹಂತದಲ್ಲಿದ್ದು, ಅಲ್ಲಿ ತಾಲೂಕು ಕಚೇರಿ ಕಾರ್ಯಾರಂಭ ಮಾಡಲಿದೆ ಎಂದರು.
ಹಾಸ್ಟೆಲ್‌ಗಳು ಉತ್ತಮವಾಗಿರಲು ವಾರ್ಡನ್‌ಗಳು ಇನ್ನೂ ಹೆಚ್ಚಿನ ಗಮನ ಹರಿಸಬೇಕು. ಶುಚಿತ್ವ ಹಾಗೂ ಗುಣಮಟ್ಟದ ಆಹಾರ ಕೊಡಲು ಪ್ರಯತ್ನಿಸಬೇಕು. ವಿದ್ಯಾಥಿಗಳು ಸರ್ಕಾರದ ಸವಲತ್ತುಗಳನ್ನು ಉಪಯೋಗಿಸಿಕೊಂಡು ಉತ್ತಮ ನಾಗರಿಕರಾಗಿ ಸ್ವಾವಲಂಬಿಗಳಾಗಿ, ತಂದೆ, ತಾಯಿ ಹಾಗೂ ಹಾಸ್ಟೆಲ್‌ಗೆ ಒಳ್ಳೆಯ ಹೆಸರು ತರಬೇಕೆಂದು ತಿಳಿಸಿದರು.
ನಿಲಯಪಾಲಕರಾದ ಮೀನಾ, ಶಿವಕುಮಾರ್ ಇತರರು ಇದ್ದರು.