ಜಿಲ್ಲೆ

ಹಾಸ್ಟೆಲ್ ಗಳಿಗೆ ಆಗಾಗ್ಗೆ ಭೇಟಿ ನೀಡಿ: ಮಹೇಶ್ ಸಲಹೆ

ಮೈಸೂರು: ತಾಲೂಕು ಕಲ್ಯಾಣಾಧಿಕಾರಿಗಳು ಹಾಸ್ಟೆಲ್‌ಗಳಿಗೆ ಆಗಾಗ್ಗೆ ಭೇಟಿ ನೀಡಿ ಪರಿಶೀಲಿಸಬೇಕು. ಸಮಸ್ಯೆಗಳು ಕಂಡು ಬಂದರೆ ನಿಮ್ಮ ಹಂತದಲ್ಲಿ ಬಗೆಹರಿಸಬಹುದಾದದ್ದನ್ನು ತಕ್ಷಣವೇ ಬಗೆಹರಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವಂಥೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಿ.ಆರ್.ಮಹೇಶ್ ಸಲಹೆ ನೀಡಿದರು.
ನಗರದ ರಾಜರಾಜೇಶ್ವರಿ ನಗರದಲ್ಲಿರುವ ಡಿ. ದೇವರಾಜ ಅರಸು ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯದಲ್ಲಿ ಶನಿವಾರ ಆಯೋಜಿಸಿದ್ದ ತಾಲೂಕು ಕಲ್ಯಾಣಾಧಿಕಾರಿಗಳು, ವಿಸ್ತರಣಾಧಿಕಾರಿಗಳು ಹಾಗೂ ಜಿಲ್ಲೆಯ ವಿದ್ಯಾರ್ಥಿನಿಲಯಗಳ ನಿಲಯಪಾಲಕರ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಲವು ಹಾಸ್ಟೆಲ್‌ಗಳಲ್ಲಿ ತಳ ಹಂತದಲ್ಲಿಯೇ ಬಗೆಹರಿಸಬಹುದಾದ ಕೆಲ ಸಮಸ್ಯೆಗಳು ಇರುತ್ತವೆ. ಹಾಸ್ಟೆಲ್‌ನಲ್ಲಿರುವ ಕಂಪ್ಯೂಟರ್‌ಗಳು ಸುಸ್ಥಿತಿಯಲ್ಲಿವೆಯೇ, ಅವುಗಳನ್ನು ವಿದ್ಯಾರ್ಥಿಗಳು ಉಪಯೋಗಿಸುತ್ತಿದ್ದಾರೆ. ಇಂಟರ್‌ನೆಟ್ ಸೌಲಭ್ಯವಿದೆಯೇ? ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಪುಸ್ತಕಗಳು ಇದೆಯೇ. ಸರ್ಕಾರದ ಉದ್ದೇಶ ಈಡೇರಿದೆಯೇ? ಎನ್ನುವುದನ್ನು ಪರಿಶೀಲಿಸಬೇಕು ಎಂದರು.
ಕೆಲವು ಹಾಸ್ಟಲ್‌ಗಳಿಗೆ ನಾನು ಭೇಟಿ ಕೊಟ್ಟಾಗ ಬಾತ್‌ರೂಂಗಳಿಗೆ ಚಿಲಕವೇ ಇಲ್ಲ. ಕುಡಿಯುವ ನೀರಿನ ಸಮಸ್ಯೆ ಇದೆ ಎನ್ನುವ ದೂರುಗಳು ಕೇಳಿ ಬಂದವು. ನಿಮ್ಮ ಮನೆಯಲ್ಲಿ ಇಂತಹ ಸಮಸ್ಯೆ ಇದ್ದರೆ ಹೊರಗಿನಿಂದ ಬಂದು ಬಗೆಹರಿಸುತ್ತಾರೆ ಎಂದು ಸುಮ್ಮನೆ ಇರುತ್ತಿದ್ದಿರಾ ಎಂದು ತರಾಟೆಗೆ ತೆಗೆದುಕೊಂಡರು.
ಪ್ರತಿದಿನ ಮೆನು ಚಾರ್ಟ್ ಪ್ರಕಾರ ಹಾಸ್ಟೆಲ್‌ಗಳಲ್ಲಿ ಊಟ ಕೊಡುವಾಗ ವಾರ್ಡನ್ ಫೋಟೋ ಸಹಿತ ಮಾಹಿತಿ ಕಳಿಸಬೇಕು. ಶುಚಿತ್ವ ಕಾಪಾಡಿಕೊಳ್ಳಬೇಕು. ಕರಾಟೆ ತರಗತಿ ಮತ್ತು ಸ್ಪೋಕನ್ ಇಂಗ್ಲಿಷ್ ತರಗತಿಗಳನ್ನು ಸರಿಯಾಗಿ ನಡೆಸಬೇಕು. ನಾನೂ ಸಹ ದಿಢೀರ್ ಭೇಟಿ ನೀಡಲಿದ್ದು, ಲೋಪದೋಷಗಳು ಕಂಡುಬಂದರೆ ಆಯಾ ತಾಲೂಕಿನ ಕಲ್ಯಾಣಾಧಿಕಾರಿಗಳನ್ನೇ ಜವಾಬ್ದಾರರನ್ನಗಿ ಮಾಡಲಾಗುವುದು ಎಂದು ಎಚ್ಚರಿಸಿದರು.
ವಿವಿಧ ತಾಲೂಕು ಕಲ್ಯಾಣಾಧಿಕಾರಿಗಳಾದ ವಿಶ್ವನಾಥ್, ಚಂದ್ರಕಲಾ, ಸುಜೇಂದ್ರಕುಮಾರ್, ಮಹೇಶ್, ಸ್ಪರ್ಣಲತಾ, ಶಶಿಕಲಾ, ಪ್ರೇಮ್‌ಕುಮಾರ್, ವಿಸ್ತರಣಾಧಿಕಾರಿಗಳಾದ ಸತೀಶ್, ಸುಕನ್ಯ, ರಾಜಣ್ಣ, ಮೀನಾ, ಮಹಾಲಕ್ಷ್ಮಿ, ಕಚೇರಿ ವ್ಯವಸ್ಥಾಪಕರಾದ ದೀಪಕ್, ಛಾಯಾ, ನಿರಂಜನಮೂರ್ತಿ, ಜಿಲ್ಲೆಯ ಎಲ್ಲ ನಿಲಯಪಾಲಕರು ಇದ್ದರು.