ಜಿಲ್ಲೆ

ಹಾಸಿಗೆ ಇಲ್ಲದೆ ವೃದ್ಧೆ ನರಳಾಟ

ಕೋಲಾರ: ಎಸ್ಸೆನ್ನಾರ್ ಕೋವಿಡ್ ಜಿಲ್ಲಾಸ್ಪತ್ರೆಯಲ್ಲಿ ಕರೊನಾ ಸೋಂಕಿತ 65 ವರ್ಷದ ವೃದ್ಧೆಯೊಬ್ಬರು ಹಾಸಿಗೆ ವ್ಯವಸ್ಥೆ ಇಲ್ಲದೆ ನೆಲದಲ್ಲಿ ಮಲಗಿ ನರಳಾಡಿದ ವಿಡಿಯೋ ಮಂಗಳವಾರ ವೈರಲ್ ಆಗಿದೆ.

ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬಂದ ನಂತರ ಮಲಗಲು ಬೆಡ್ ವ್ಯವಸ್ಥೆ ಸಿಗದೆ ನೆಲದಲ್ಲೇ ಹೊದಿಕೆ ಹೊದ್ದುಕೊಂಡು ಮಲಗಿದ್ದ ದೃಶ್ಯ ವಿಡಿಯೋದಲ್ಲಿ ಕಂಡುಬಂದಿದೆ. ಇದರೊಂದಿಗೆ ಮೂಲ ಸೌಲಭ್ಯ ಕೊರತೆಯೂ ಇದೆ ಎಂಬ ಆರೋಪ ವ್ಯಕ್ತವಾಗಿದೆ.

ಡಿಸಿ ಭೇಟಿ: ವಿಡಿಯೋ ವೈರಲ್ ಆಗುತ್ತಿದ್ದಂತೆ ಆಸ್ಪತ್ರೆಗೆ ಭೇಟಿ ನೀಡಿದ ಡಿಸಿ ಸಿ.ಸತ್ಯಭಾಮ ಜಿಲ್ಲಾ ಸರ್ಜನ್ ಡಾ. ಎಸ್.ಜಿ.ನಾರಾಯಣಸ್ವಾಮಿ ಇತರರಿಂದ ಮಾಹಿತಿ ಪಡೆದರಲ್ಲದೆ ವೃದ್ಧೆಗೆ ಹಾಸಿಗೆ ವ್ಯವಸ್ಥೆ ಸೇರಿ ಕೋವಿಡ್ ವಾರ್ಡ್‌ನಲ್ಲಿ ಮೂಲಸೌಲಭ್ಯ ಕೊರತೆ ಇದ್ದರೆ ನೀಗಿಸುವಂತೆ ಸೂಚನೆ ನೀಡಿದರು.

ಒಂದೇ ದಿನ 99 ಸೋಂಕಿತರು ಪತ್ತೆ: ಜಿಲ್ಲೆಯಲ್ಲಿ ಮಂಗಳವಾರ 99 ಮಂದಿಗೆ ಕರೊನಾ ದೃಢಪಟ್ಟಿದೆ. ಬಂಗಾರಪೇಟೆಯಲ್ಲಿ ಜ್ವರದಿಂದ ಬಳಲುತ್ತಿದ್ದ 70 ವರ್ಷದ ವೃದ್ಧೆ ಮೃತಪಟ್ಟಿದ್ದಾರೆ. ಕೋಲಾರದಲ್ಲಿ 43 ಪ್ರಕರಣ ದೃಢಪಟ್ಟರೆ, ಮಾಲೂರಿನಲ್ಲಿ 21, ಬಂಗಾರಪೇಟೆಯಲ್ಲಿ 16, ಕೆಜಿಎಫ್ 14 ಹಾಗೂ ಮುಳಬಾಗಿಲಿನಲ್ಲಿ 5 ಪ್ರಕರಣ ದೃಢಪಟ್ಟಿವೆ. ಸುಮಾರು 39 ಸೋಂಕಿತರನ್ನು ಆರ್.ಎಲ್. ಜಾಲಪ್ಪ ಆಸ್ಪತ್ರೆ, 5 ಸೋಂಕಿತರನ್ನು ಕೆಜಿಎಫ್‌ನ ಆಸ್ಪತ್ರೆಯಲ್ಲಿ ಹಾಗೂ ಉಳಿದ ಸೋಂಕಿತರನ್ನು ಎಸ್ಸೆನ್ನಾರ್ ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್‌ನಲ್ಲಿ ದಾಖಲಿಸಲಾಗಿದೆ. ಸೋಂಕಿತರ ಪ್ರಥಮ ಸಂಪರ್ಕದಲ್ಲಿದ್ದ 495 ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 297 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.

ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 658ಕ್ಕೆ ಏರಿಕೆಯಾಗಿದೆ. ಮಂಗಳವಾರ ಕೋಲಾರದಿಂದ 4, ಬಂಗಾರಪೇಟೆಯ 4 ಹಾಗೂ ಕೆಜಿಎಫ್, ಮುಳಬಾಗಿಲಿನಿಂದ ತಲಾ ಒಬ್ಬರು ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಬಿಡುಗಡೆಯಾದವರ ಸಂಖ್ಯೆ 220 ಆಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 420 ಆಗಿದೆ.

ಜಿಲ್ಲೆಯಲ್ಲಿ ಇದುವರೆಗೆ 20770 ಮಾದರಿ ಪರೀಕ್ಷಿಸಲಾಗಿದ್ದು, 17,469 ಮಾದರಿ ನೆಗೆಟಿವ್ ಬಂದಿವೆ. ಒಟ್ಟು 18 ಮಂದಿ ಮೃತಪಟ್ಟಿದ್ದಾರೆ. ಕೋಲಾರದ ಎಪಿಎಂಸಿ ವಾಹನ ಚಾಲಕನಿಗೆ ಕರೊನಾ ದೃಢಪಟ್ಟಿದ್ದು, ಎರಡು ಮಂಡಿಗಳನ್ನು ಸೀಲ್‌ಡೌನ್ ಮಾಡಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ.

2 ದಿನ ಕಚೇರಿ ಬಂದ್: ಕೋಲಾರ ತಾಲೂಕು ಕಚೇರಿಯಲ್ಲಿ ಒಬ್ಬರಿಗೆ ಕರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಜು. 22, 23ರಂದು ಎರಡು ದಿನ ಕಚೇರಿಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಎಲ್ಲ ಸಿಬ್ಬಂದಿ ಜು. 24, 25ರ ನಾಲ್ಕನೇ ಶನಿವಾರ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕೆಂದು ತಹಸೀಲ್ದಾರ್ ಶೋಭಿತಾ ಸೂಚಿಸಿದ್ದಾರೆ.