ಹಾಸನ: ಹಾಸನ ಶಕ್ತಿ ದೇವತೆ ಹಾಸನಾಂಬೆಯ ದರ್ಶನ 4ನೇ ದಿನವಾದ ಭಾನುವಾರ ದೇವಾಲಯಕ್ಕೆ ಸಾಗರೋಪಾದಿಯಲ್ಲಿ ಬಂದ ಭಕ್ತರು ದೇವಿ ದರ್ಶನ ಪಡೆದರು.
ರಜಾ ದಿನವಾದ್ದರಿಂದ ಜಿಲ್ಲೆ ಮಾತ್ರವಲ್ಲದೆ ರಾಜ್ಯದ ವಿವಿಧ ಜಿಲ್ಲೆಯ ಲಕ್ಷಾಂತರ ಭಕ್ತರು ದೇವಿ ದರ್ಶನ ಪಡೆದು ಕೃಪೆಗೆ ಪಾತ್ರರಾಗಿದ್ದಾರೆ. ಬೆಳಗ್ಗೆಯಿಂದಲೂ ಸರದಿ ಸಾಲಿನಲ್ಲಿ ಜನರ ಪ್ರವಾಹ ಕಂಡುಬಂತು. ಆದರೆ, 300 ರೂ. ಹಾಗು 1 ಸಾವಿರ ರೂ. ಟಿಕೆಟ್ ಸರತಿ ಸಾಲುಗಳು ಬೆಳಗ್ಗೆ ಸಾಧಾರಣವಾಗಿತ್ತು. ಮಧ್ಯಾಹ್ನ 12 ಗಂಟೆಯಾಗುತ್ತಿದ್ದಂತೆ ಟಿಕೆಟ್ ಕೌಂಟರ್‌ಗಳಲ್ಲೂ ಜನದಟ್ಟಣೆ ಕಂಡು ಬಂತು. ಶನಿವಾರ ರಾತ್ರಿಯೂ ಸರತಿ ಸಾಲುಗಳು ಜನರಿಂದ ತುಂಬಿ ತುಳುಕುತ್ತಿದ್ದವು.
ನಗರದಲ್ಲಿ ಹೆಚ್ಚಿದ ವಾಹನ ದಟ್ಟಣೆ:
ಹಾಸನಂಬ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ರಾಜ್ಯದ ನಾನಾ ಭಾಗದಿಂದ ಲಕ್ಷಾಂತರ ಭಕ್ತರು ತಂಡೋಪ ತಂಡವಾಗಿ ಆಗಮಿಸುತ್ತಿರುವುದರಿಂದ ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಟ್ರಾಫಿಕ್ ಸಮಸ್ಯೆಯಿಂದ ವಾಹನ ಸವಾರರು ಪರದಾಡುವಂತಾಗಿದೆ.
ಇನ್ನೂ ಕೆಲವೆಡೆ ಪಾಕಿರ್‌ಂಗ್ ಸಮಸ್ಯೆಯಿಂದ ವಾಹನ ಸವಾರರು ವಾಹನ ನಿಲುಗಡೆಗೆ ಸಾಕಷ್ಟು ತೊಂದರೆ ಅನುಭವಿಸಿದರು. ರಸ್ತೆ ಬದಿಗಳಲ್ಲಿ ವಾಹನಗಳನ್ನು ನಿಲ್ಲಿಸಿ ದೇವಸ್ಥಾನಗಳಿಗೆ ತೆರಳುತ್ತಿದ್ದರು.
ದರುಶನಕ್ಕಾಗಿ ಗಂಟೆಗಟ್ಟಲೆ:
ವೀಕೆಂಡ್ ಹಿನ್ನೆಲೆ ಹಾಸನಂಬ ದೇವಾಲಯಕ್ಕೆ ಜನಸಾಗರವೇ ಹರಿದು ಬಂದಿರುವುದರಿಂದ, ದರ್ಶನದ ಸಾರಥಿ ಸಾಲಿನಲ್ಲಿ ನಿಂತು ದರ್ಶನ ಪಡೆಯಲು ಭಕ್ತರು ಗಂಟೆಗಟ್ಟಲೆ ಕಾಯಬೇಕಾಗಿದೆ. ಆದರೆ ಭಕ್ತರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಅಗತ್ಯ ಕ್ರಮಗಳನ್ನು ಜಿಲ್ಲಾಡಳಿತ ವತಿಯಿಂದ ಕೈಗೊಳ್ಳಲಾಗಿದೆ. ಬಿಸಿಲಿನ ತಾಪವನ್ನ ತಣಿಸಲು ಜರ್ಮನ್ ಟೆಂಟ್ ಅಳವಡಿಸಲಾಗಿದ್ದು, ಮತ್ತು ಫ್ಯಾನ್ ವ್ಯವಸ್ಥೆಯನ್ನು ಮಾಡಲಾಗಿದೆ. ಸಾಲಿನಲ್ಲಿ ತೆರಳುವಾಗ ಸ್ಕೌಟ್ ಅಂಡ್ ಗೈಡ್‌ನ ಸ್ವಯಂಸೇವಕರು ಕುಡಿಯುವ ನೀರು, ಮಜ್ಜಿಗೆ ವ್ಯವಸ್ಥೆ ಮಾಡಲಾಗಿದೆ.
ಪ್ರಸಾದ ಸೇವಿಸಿ ಮೆಚ್ಚುಗೆ ವ್ಯಕ್ತಪಡಿಸಿದ ನ್ಯಾಯಾಧೀಶರು:
ಹಾಸನಂಬ ದೇವಿಯ ದರ್ಶನ ಪಡೆಯಲು ಹೈಕೋರ್ಟ್‌ನ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರು ಕುಟುಂಬ ಸದಸ್ಯರಾಗಿ ಆಗಮಿಸಿ ದೇವಿಯ ದರ್ಶನ ಪಡೆದರು. ನಂತರ ದೇವಸ್ಥಾನದಲ್ಲಿ ಮಾಡಲಾಗಿರುವಂತಹ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿದರು. ನಂತರ ಭಕ್ತಾದಿಗಳಿಗೆ ನೀಡುವಂತಹ ಪ್ರಸಾದವನ್ನು ಸೇವಿಸಿದರು. ಈ ಬಾರಿ ಹಾಸನಂಬ ಜಾತ್ರಾ ಮಹೋತ್ಸವದಲ್ಲಿ ಅಚ್ಚುಕಟ್ಟಾಗಿ ಎಲ್ಲಾ ಕಾರ್ಯಗಳನ್ನು ಆಯೋಜನೆ ಮಾಡಿರುವ ಜಿಲ್ಲಾಡಳಿತ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಿ ಸತ್ಯಭಾಮಾ ಅವರು ನ್ಯಾಯಮೂರ್ತಿ ಎಚ್ಪಿ ಸಂದೇಶ್ ಅವರನ್ನ ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆತ್ತೂರಿನವರು.
ಇಂದು ಸಂಜೆ ಮುಖ್ಯಮಂತ್ರಿ ಆಗಮನ:
ಹಾಸನಾಂಬೆಯ ದರ್ಶನ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಲ ಸಚಿವ ಸಂಪುಟದ ಸಹೋದ್ಯೋಗಿಗಳೊಂದಿಗೆ ಇಂದು ಸಂಜೆ ನಗರಕ್ಕೆ ಆಗಮಿಸಿ ದೇವಿಯ ದರ್ಶನವನ್ನು ಪಡೆಯಲಿದ್ದಾರೆ. ಬೆಳಗ್ಗೆ ಸಚಿವ ಸಂಪುಟ ಸಭೆ ಇರುವುದರಿಂದ ಅದನ್ನು ಮುಗಿಸಿಕೊಂಡು ಹಾಸನದತ್ತ ಪ್ರಯಾಣ ಬೆಳೆಸಲಿದ್ದಾರೆ ಎಂದು ಜಿಲ್ಲಾಡಳಿತದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದರ್ಶನ ಪಡೆದ ಗಣ್ಯರು:
ಭಾನುವಾರ ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆದರು. ಇದರ ಜೊತೆಗೆ ರಾಜಕಾರಣಿಗಳು, ಚಲನಚಿತ್ರ ನಟ-ನಟಿಯರು ಸೇರಿದಂತೆ ಹಲವರು ಆಗಮಿಸಿದ್ದಾರೆ ಅವರಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಸಚಿವ ಎಚ್.ಡಿ. ಕುಮಾರಸ್ವಾಮಿ ದಂಪತಿ, ಹೈಕೋರ್ಟ್‌ನ ನ್ಯಾಯಮೂರ್ತಿ ಎಚ್.ಪಿ. ಸಂದೇಶ್, ವಿನಯ್ ಗುರೂಜಿ, ಖ್ಯಾತ ನಿರ್ದೇಶಕ ತರುಣ್ ಸುಧೀರ್ ದಂಪತಿ, ಶಾಸಕಿ ನಯನ ಮೊಟ್ಟಮ್ಮ ,ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕ ರಾಜುಗೌಡ ಸೇರಿದಂತೆ ಇನ್ನಿತರರು ಆಗಮಿಸಿದ್ದರು.
ಗರ್ಭಗುಡಿ ಪ್ರವೇಶ ನಿಷೇಧ:
ಹಾಸನಂಬ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಭಕ್ತರ ಹಿತ ದೃಷ್ಟಿಯಿಂದ ದೇವಾಲಯದ ಗರ್ಭಗುಡಿ ಪ್ರವೇಶ ಮತ್ತು ಶಿಷ್ಟಾಚಾರ ವ್ಯವಸ್ಥೆಯನ್ನು ರದ್ದುಪಡಿಸಲಾಗಿದೆ ಎಂದು ದೇವಸ್ಥಾನದ ಆಡಳಿತ ಅಧಿಕಾರಿ ಮಾರುತಿ ಆದೇಶ ಹೊರಡಿಸಿದ್ದಾರೆ.
ಕಳೆದ ಮೂರು ದಿನಗಳಿಂದ ಶಿಷ್ಟಾಚಾರ ಪಾಲನೆ ಮತ್ತು ಗರ್ಭಗುಡಿಗೆ ಕೆಲವರನ್ನ ಬಿಡಲಾಗುತ್ತಿತ್ತು. ಆದರೆ ಭಕ್ತರ ಹಿತದೃಷ್ಟಿ ಮತ್ತು ಭಕ್ತಾದಿಗಳ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಭಾನುವಾರದಿಂದ ಮುಂದಿನ ಆದೇಶದವರಿಗೂ ರದ್ದುಪಡಿಸಿ ಆದೇಶ ಹೊರಡಿಸಲಾಗಿದೆ.