ಜಿಲ್ಲೆ

ಹಾಸನಾಂಬೆ ದೇವಿ ದರ್ಶನಕ್ಕೆ ಹರಿಬಂದ ಜನ ಸಾಗರ

ಹಾಸನ: ಹಾಸನಾಂಬೆ ದೇವಿ ದರ್ಶನಕ್ಕೆ ಸೋಮವಾರ ಜನ ಸಾಗರವೇ ಹರಿದು ಬಂದಿದ್ದು ಕಿಲೋಮೀಟರ್‌ಗಟ್ಟಲೇ ಭಕ್ತರು ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆದರು. ಸೋಮವಾರ ಅಂದಾಜು 2 ಲಕ್ಷ ಜನರು ಆಗಮಿಸಿದ್ದು, ಮೂರು ದಿನದಲ್ಲಿ ಒಟ್ಟಾರೆ 8 ಲಕ್ಷ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ.

ಹಾಸನಾಂಬೆ ದೇವಿ ವಿಶೇಷ ದರ್ಶನದ ಟಿಕೆಟ್ ಹಾಗೂ ಲಾಡು ಮಾರಾಟದಿಂದ ದೇವಾಲಯಕ್ಕೆ ಕೋಟಿ ಕೋಟಿ ಆದಾಯ ಹರಿದು ಬರುತ್ತಿದೆ. ಭಾನುವಾರ ರಾತ್ರಿ ಏಳು ಗಂಟೆಯವರೆಗೂ 300 ರೂ. ವಿಶೇಷ ದರ್ಶನದ ಟಿಕೆಟ್‌ಗಳನ್ನು ಪಡೆದು ದೇವಿ ದರ್ಶನ ಮಾಡಿರುವವರ ಸಂಖ್ಯೆ 22,217 ಆಗಿದ್ದು, ಅದರಿಂದ 66,35,100 ಮೊತ್ತ ಸಂಗ್ರಹವಾಗಿದೆ. 1000 ರೂ. ವಿಶೇಷ ದರ್ಶನದ ಟಿಕೆಟ್‌ಗಳನ್ನು ಪಡೆದು ದರ್ಶನ ಮಾಡಿರುವವರ ಸಂಖ್ಯೆ 15,713 ಆಗಿದ್ದು, ಅದರಿಂದ 1,57,13,000 ಮೊತ್ತ ಸಂಗ್ರಹವಾಗಿದೆ. ಲಾಡು ಪ್ರಸಾದ ಮಾರಾಟವಾಗಿರುವ ಸಂಖ್ಯೆ 30,750 ಆಗಿದ್ದು, ಅದರಿಂದ 18,45,000 ಮೊತ್ತ ಸಂಗ್ರಹವಾಗಿದೆ. ಒಟ್ಟು ಭಾನುವಾರ ರಾತ್ರಿ ಏಳು ಗಂಟೆಯವರೆಗೂ 2,41,93,100 ರೂ. ಆದಾಯ ಸಂಗ್ರಹವಾಗಿದೆ.

ಹಾಸನಾಂಬೆ ದೇವಾಲಯಕ್ಕೆ ಭಕ್ತರ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಏರಿಕೆ ಕಂಡು ಬರುತ್ತಿದೆ. ಸೋಮವಾರ ಧರ್ಮ ದರ್ಶನದಲ್ಲಿ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಂತು ದರ್ಶನ ಪಡೆಯುತ್ತಿರುವವರು ಮಾತ್ರವಲ್ಲದೇ ವಿವಿಐಪಿ, 1000 ರೂ, 300 ರೂ. ಟಿಕೆಟ್‌ಗಳ ವಿಶೇಷ ದರ್ಶನದ ಸಾಲುಗಳೂ ಕೂಡ ಜನರಿಂದ ತುಂಬಿ ಹೋಗಿತ್ತು. ಹೀಗಾಗಿ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ನಿಗಾ ವಹಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಅವರೇ ಖುದ್ದಾಗಿ ಕುರ್ಚಿಯ ಮೇಲೆ ನಿಂತು ಪರಿಸ್ಥಿತಿ ನಿಯಂತ್ರಿಸಿದರು.

ಕ್ರೀಡಾಪಟುಗಳ ಬೇಸರ:

ಹಾಸನಾಂಬ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ ರಸ್ತೆ ಓಟ ಸ್ಪರ್ದೆಯ ಕ್ರೀಟಾಪಟುಗಳಿಗೆ ದೇವಿ ದರ್ಶನಕ್ಕೆ ಅವಕಾಶ ಕೊಡದೇ ಬೆಳಗಿನಿಂದ ಸಾಲಿನಲ್ಲೇ ನಿಲ್ಲಿಸಿ ಸಂಜೆ 5 ಗಂಟೆಯ ವೇಳೆಗೆ ಅವಕಾಶ ಕೊಟ್ಟ ಪರಿಣಾಮ ಊಟವಿಲ್ಲದೇ ನರಳುವ ಪರಿಸ್ಥಿತಿ ಉಂಟಾಗಿದೆ ಎಂದು ಕ್ರೀಡಾಪಟುಗಳು ಹಾಗೂ ಆಯೋಜಕರು ಬೇಸರ ವ್ಯಕ್ತಪಡಿಸಿದರು.

ಹಾಸನ ಜಿಲ್ಲಾ ಅಥ್ಲೇಟಿಕ್ ಸಂಸ್ಥೆ, ಶ್ರೀ ಸಾಯಿಬಾಬಾ ಟ್ರಸ್ಟ್ ಕಾರ್ಲೇ ಸಹಯೋಗದಲ್ಲಿ ಹಾಸನಾಂಬೆ ಜಾತ್ರಾ ಮಹೋತ್ಸವದ ಪ್ರಯುಕ್ತ ನಾಲ್ಕನೆ ವರ್ಷದ ರಾಜ್ಯಮಟ್ಟದ ಹಾಸನಾಂಬ ರಸ್ತೆ ಓಟ ಸ್ಪರ್ದೆಯಲ್ಲಿ 260ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಮೊಸಳೆ ಹೊಸಳ್ಳಿ ಗ್ರಾಮದಿಂದ ಹಾಸನ ನಗರದ ಹೊರವಲಯವಾದ ಕೆಐಡಿಬಿಐ ವೃತ್ತದವರೆಗೂ ಬೆಳಗಿನ ಜಾವದಂದು ಹತ್ತು ಕಿಲೋ ಮೀಟರ್ ಓಟದ ಸ್ಪರ್ಧೆ ನಡೆಯಿತು. ನಂತರ ಬಂದವರಿಗೆ ಹಾಸನಾಂಬೆ ದರ್ಶನ ಮಾಡಿಸುವ ನಿಟ್ಟಿನಲ್ಲಿ ಹಾಸನಾಂಬೆ ದೇವಾಲಯದ ಬಳಿ ಕ್ರೀಡಾಪಟುಗಳನ್ನು ಕರೆತರಲಾಯಿತು. ಆದರೆ ದೇವಾಲಯಕ್ಕೆ ಬಂದ ಮಕ್ಕಳಿಗೆ ಬೆಳಗಿನಿಂದ ಸಂಜೆಯವರೆಗೂ ಸಾಲಿನಲ್ಲಿ ನಿಲ್ಲಿಸಿ ಸಂಜೆ 5 ಗಂಟೆ ಸಮಯಕ್ಕೆ ದೇವರ ದರ್ಶನದ ಭಾಗ್ಯವನ್ನು ಜಿಲ್ಲಾಡಳಿತ ಕಲ್ಪಿಸಿತು.