ಜಿಲ್ಲೆ

ಹಾಸನಾಂಬೆ ದರ್ಶನೋತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮನ

ಹಾಸನ: ಶಕ್ತಿದೇವತೆ ಹಾಸನಾಂಬೆ ದರ್ಶನೋತ್ಸವದ ನಾಲ್ಕನೇ ದಿನವಾದ ಭಾನುವಾರ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು.


ಭಾನುವಾರ ರಜಾದಿನವಾದ ಕಾರಣ ನಿರೀಕ್ಷೆಯಂತೆ ಭಕ್ತರ ಸಂಖ್ಯೆ ಹೆಚ್ಚಿತ್ತು. ಬೆಳಗ್ಗೆ 6 ಗಂಟೆಗೆ ಸಾರ್ವಜನಿಕ ದರ್ಶನ ಆರಂಭವಾಯಿತು. ಆದರೆ ಬೆಳಗಿನ ಜಾವ 3 ಗಂಟೆ ವೇಳೆಗೇ ಭಕ್ತರು ದೇವಸ್ಥಾನಕ್ಕೆ ಬಂದು ಸರದಿ ಸಾಲಿನಲ್ಲಿ ನಿಲ್ಲಲಾರಂಭಿಸಿದರು.


ಸಾಮಾನ್ಯ ಸರತಿ ಸಾಲು, ಸಾವಿರ ರೂ. ಮತ್ತು 300 ರೂ. ಟಿಕೆಟ್‌ಗಳ ವಿಶೇಷ ದರ್ಶನದ ಸಾಲುಗಳು ಸಹ ಉದ್ದವಾಗಿ ಬೆಳೆದಿದ್ದವು. ಬೆಳಗ್ಗೆ 6 ಗಂಟೆಗೆ ದೇವಿಯ ದರ್ಶನ ಆರಂಭವಾದ ನಂತರ ಸರತಿ ಸಾಲಿನಲ್ಲಿದ್ದ ಒತ್ತಡದ ಕಡಿಮೆಯಾಗುತ್ತಾ ಬಂದಿತು. ಮಧ್ಯಾಹ್ನ 1 ಗಂಟೆಯವರೆಗೆ ನಿರಂತರವಾಗಿ ಸಾರ್ವಜನಿಕ ದರ್ಶನ ನಡೆದರೂ ಭಕ್ತರ ಸಂಖ್ಯೆ ಕಡಿಮೆ ಆಗಿರಲಿಲ್ಲ. ಹೊಸದಾಗಿ ಬಂದ ಭಕ್ತರು ಸಾಲಿನಲ್ಲಿ ಸೇರುತ್ತಿದ್ದರಿಂದ ಸರತಿ ಸಾಲು ಕುಗ್ಗಲಿಲ್ಲ.

ಹೆಚ್ಚಿದ ಒತ್ತಡ:
ದೇವಿಗೆ ಅಲಂಕಾರ ಮತ್ತು ನೈವೇದ್ಯಕ್ಕಾಗಿ ಮಧ್ಯಾಹ್ನ 1 ಗಂಟೆಗೆ ಗರ್ಭಗುಡಿಯ ಬಾಗಿಲು ಮುಚ್ಚಲಾಯಿತು. ಸಂಜೆ 4 ಗಂಟೆ ಆದರೂ ಬಾಗಿಲು ತೆರೆಯದ ಕಾರಣ ಸರತಿ ಸಾಲಿನಲ್ಲಿ ಕಾಯುತ್ತಿದ್ದ ಭಕ್ತರು ಅಸಮಾಧಾನಗೊಂಡರು. ರಜಾ ದಿನವೆಂದು ದೂರದ ಊರುಗಳಿಂದ ಬಂದಿದ್ದೇವೆ. ಇಂದು ಸಹ ಗಂಟೆಗಟ್ಟಲೆ ಗರ್ಭಗುಡಿಯ ಬಾಗಿಲು ಹಾಕಿಕೊಂಡು ಪೂಜೆ ಮಾಡುವ ಅಗತ್ಯವೇನಿದೆ. ಆದಷ್ಟು ಬೇಗ ಪೂಜೆ ಮುಗಿಸಿ ದರ್ಶನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಗರ್ಭಗುಡಿಯ ಬಾಗಿಲು ತೆಗೆಯುವುದು ತಡವಾದಷ್ಟೂ ಸರತಿ ಸಾಲಿನ ಮೇಲೆ ಒತ್ತಡ ಹೆಚ್ಚಲಾರಂಭಿಸಿತು. ಕೊನೆಗೆ ಸಂಜೆ 4.30ರ ವೇಳೆಗೆ ಗರ್ಭಗುಡಿಯ ಬಾಗಿಲು ತೆರೆದು ದೇವಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.

ಉಚಿತ ಪ್ರಸಾದ, ಅಚ್ಚುಕಟ್ಟಾದ ವ್ಯವಸ್ಥೆ:
ರಜಾದಿನವಾದ ಕಾರಣ ಭಕ್ತರ ಸಂಖ್ಯೆ ಹೆಚ್ಚಿ ಸರತಿ ಸಾಲಿನಲ್ಲಿ ಒತ್ತಡ ಉಂಟಾಗಿತ್ತು ಎಂಬುದನ್ನು ಬಿಟ್ಟರೆ ಅಚ್ಚುಕಟ್ಟಾದ ವ್ಯವಸ್ಥೆ ಕರಿತು ಬಹುತೇಕ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದರು. ಸರತಿ ಸಾಲಿನಲ್ಲಿ ನಿಂತಿದ್ದವರಿಗೆ ಕುಡಿಯುವ ನೀರು ವ್ಯವಸ್ಥೆ ಮಾಡಲಾಗಿತ್ತು. ಹೆಚ್ಚುಹೊತ್ತು ನಿಲ್ಲಲು ಸಾಧ್ಯವಿಲ್ಲದವರಿಗೆ ಕುರ್ಚಿ ವ್ಯವಸ್ಥೆ ಸಹ ಇತ್ತು. ಇನ್ನು ದರ್ಶನ ಮುಗಿದ ನಂತರ ಎಲ್ಲ ಭಕ್ತರಿಗೂ ದೊನ್ನೆಯಲ್ಲಿ ಪ್ರಸಾದ ವಿತರಿಸಲಾಯಿತು.

ಗಣ್ಯರ ಭೇಟಿ:
ಭಾನುವಾರ ಸಂಸದ ಪ್ರಜ್ವಲ್ ರೇವಣ್ಣ ಹಾಸನಾಂಬೆ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಹಿಂದಿನ ಜಿಲ್ಲಾಧಿಕಾರಿ ಆರ್. ಗಿರೀಶ್ ಮತ್ತು ಹಾಸನ ಕ್ಷೇತ್ರದ ಶಾಸಕ ಪ್ರೀತಂಗೌಡ ಅವರು ಕುಟುಂಬ ಸಹಿತ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಚಲನಚಿತ್ರ ಹಾಸ್ಯನಟ ಶಿವರಾಜ್ ಕೆ.ಆರ್. ಪೇಟೆ ಸಹ ಭಾನುವಾರ ದೇವಿಯ ದರ್ಶನ ಪಡೆದರು.
ಭಾನುವಾರ ಸಂಜೆ 4.30ಕ್ಕೆ ಮತ್ತೆ ಆರಂಭವಾದ ದೇವಿಯ ಸಾರ್ವಜನಿಕ ದರ್ಶನ ಭಕ್ತರ ಸಂಖ್ಯೆ ಕೊನೆ ಆಗುವವರೆಗೂ ನಿರಂತರವಾಗಿ ನಡೆಯಿತು.