ಜಿಲ್ಲೆ

ಹಾಸನಾಂಬೆ ದರ್ಶನಕ್ಕೆ ಐದನೇ ದಿನವೂ ಭಕ್ತ ಸಾಗರ

ಹಾಸನ: ನಗರದ ಅಧಿದೇವತೆ ಹಾಸನಾಂಬೆ ದರ್ಶನೋತ್ಸವದ ಐದನೇ ದಿನವಾದ ಸೋಮವಾರ ಸಹ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು.

ಶಿವಮೊಗ್ಗ ಶಾಸಕ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಕುಟುಂಬ ಸಮೇತ ದೇವಸ್ಥಾನಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಹಾಸನ ಕ್ಷೇತ್ರದ ಶಾಸಕ ಪ್ರೀತಂಗೌಡ ಜೊತೆಯಲ್ಲಿದ್ದರು.


ವಾರದ ಮೊದಲ ದಿನವಾದ ಸೋಮವಾರ ಬೆಳಿಗ್ಗೆ ಕೊಂಚ ಕಡಿಮೆ ಸಂಖ್ಯೆಯಲ್ಲಿ ಭಕ್ತಾದಿಗಳು ಕಂಡು ಬಂದಿತು. ತದ ನಂತರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ದೇವಿಯ ಕೃಪೆಗೆ ಪಾತ್ರರಾದರು. ದೇವಾಲಯ ಹಾಗೂ ಗೋಪುರಗಳಿಗೆ ವಿಶೇಷವಾಗಿ ಹೂವಿನ ಅಲಂಕಾರ ಮಾಡಲಾಗಿದ್ದು ದೇವರ ದರ್ಶನ ಪಡೆಯಲು ಬಂದಿದ್ದ ಭಕ್ತಾದಿಗಳ ಕಣ್ಮನ ಸೆಳೆಯಿತು. ಭಕ್ತರು ತಮ್ಮ ಮೊಬೈಲ್‌ನಲ್ಲಿ ಪೋಟೊ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟರು.

ಸಾವಿರ ರೂ. ಟಿಕೆಟ್ ಪಡೆದು ವಿಶೇಷ ದರ್ಶನಕ್ಕೆ ನಿಂತಿದ್ದ ಭಕ್ತರ ಸಾಲು ಸಹ ಸೋಮವಾರ ಉದ್ದವಾಗಿತ್ತು.

ವಿಕಲಚೇತನರಿಗೆ ಹಿಂಬಾಗಿಲ ಪ್ರವೇಶ:
ವಿಕಲಚೇತನರು ಹಾಗೂ ವೃದ್ಧರಿಗೆ ವಿಶೇಷವಾಗಿ ದೇವಾಲಯದ ಹಿಂಭಾಗದಿಂದ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು ವಯೋವೃದ್ದರೆಲ್ಲ ಸಂತಸದಿಂದ ದೇವರ ದರ್ಶನ ಪಡೆದರು. ಸೋಮವಾರ ನಗರಸಭೆ ಅಧಿಕಾರಿ ಸಿಬ್ಬಂದಿಗಳ ಕುಟುಂಬಕ್ಕೆ ವಿಶೇಷ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಈ ಸಂದರ್ಭದಲ್ಲಿ ಒಮ್ಮೆಲೇ ದೇವಾಲಯ ಪ್ರವೇಶ ಮಾಡಿದ ಕಾರಣ ಕೆಲ ಕಾಲ ನೂಕು ನುಗ್ಗಲು ಉಂಟಾಯಿತು. ಅಲ್ಲದೆ ಸರತಿಸಾಲಿನಲ್ಲಿದ್ದ ಭಕ್ತರಿಗೆ ಅನನುಕೂಲ ಉಂಟಾಯಿತು.

ದೇವಾಲಯಗಳ ಪುನರ್‌ನಿರ್ಮಾಣ ಆಗಬೇಕು:
ಅಯೋದ್ಯೆ ಬಾಬರಿ ಮಸೀದಿ ರೀತಿ ಹಿಂದೆ ಯಾವೆಲ್ಲಾ ದೇವಸ್ಥಾನಗಳನ್ನು ಒಡೆದು ಮಸೀದಿ ನಿರ್ಮಿಸಲಾಗಿತ್ತೋ ಅವುಗಳನ್ನು ಮತ್ತೆ ದೇವಸ್ಥಾನಗಳಾಗಿ ಪುನರ್‌ನಿರ್ಮಾಣ ಆಗಬೇಕು ಎಂಬುದಾಗಿ ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿರುವುದಾಗಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ತಿಳಿಸಿದರು.

ದೇವಿಯ ದರ್ಶನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸದಾಗಿ ನಿರ್ಮಾಣವಾಗಿರುವ ಮಸೀದಿಗಳಿಗೆ ನಾವು ತೊಂದರೆ ಕೊಡಲು ಹೋಗುವುದಿಲ್ಲ. ಆದರೆ ಹಿಂದೆ ದೇವಸ್ಥಾನಗಳನ್ನು ನಾಶ ಮಾಡಿ ನಿರ್ಮಿಸಿರುವ ಮಸೀದಿಗಳನ್ನು ತೆರವುಗೊಳಿಸಿ ಅಲ್ಲಿ ಮತ್ತೆ ದೇವಸ್ಥಾನಗಳನ್ನು ನಿರ್ಮಿಸುವುದು ಹಿಂದೂ ಸಮಾಜದ ಗುರಿ ಆಗಿದೆ ಎಂದು ಹೇಳಿದರು.