ಹಾಸನ: ಹಾಸನಾಂಬ ದರ್ಶನ ಮಾಡುವ ಅವಕಾಶ ಸಿಕ್ಕಿದ್ದು ಖುಷಿಯಾಗಿದ್ದು ಎಲ್ಲರಿಗೂ ಒಳಿತು ಬಯಸಿ ಪ್ರಾರ್ಥಿಸಿದ್ದೇನೆಂದು ಮಾಜಿ ಶಾಸಕ ರಾಜುಗೌಡ ಅವರು ಹೇಳಿದರು.
ಭಾನುವಾರ ಹಾಸನಾಂಬ ದೇವಿ ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮೊದಲ ಬಾರಿಗೆ ದೇವಸ್ಥಾನಕ್ಕೆ ಬಂದಿದ್ದೇನೆ. ವಿಶೇಷ ಪವಾಡ ಇಲ್ಲಿ ನಡೆಯುತ್ತದೆ. ಹಾಸನದ ಈ ಭೂಮಿಗೆ ವಿಶೇಷ ಶಕ್ತಿಯಿದೆ. ವಿಜ್ಞಾನಕ್ಕೆ ಸವಾಲೆಸೆಯುವ ಘಟನೆಗಳು ದೇವಸ್ಥಾನದಲ್ಲಿ ನಡೆಯುತ್ತವೆ. ದೇವರಿದೆ ಎಂಬುದಕ್ಕೆ ಹಾಸನಾಂಬ ದೇಗುಲವೇ ಸಾಕ್ಷಿ. ವರ್ಷಪೂರ್ತಿ ದೀಪ ಉರಿಯುವುದು ಪವಾಡವೇ ಸರಿ ಎಂದ ಅವರು, ದೇವಸ್ಥಾನದಲ್ಲಿ ರಾಜಕೀಯ ಮಾತು ಬೇಡವೆಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ನಟ ತರುಣ್ ಸುಧೀರ್ ಅವರು ಮಾತನಾಡಿ, ಹಾಸನಾಂಬ ಗರ್ಭಗುಡಿಯಲ್ಲಿ ವಿಶೇಷ ಅನುಭೂತಿ ಆಗುತ್ತದೆ. ಎಲ್ಲಾ ಸ್ನೇಹಿತರು, ಕುಟುಂಬಸ್ಥರು ಹಾಗು ರಾಜ್ಯದ ಜನತೆಗೆ ಒಳಿತಾಗಲಿ ಎಂದು ಪ್ರಾರ್ಥಿಸಿದ್ದೇನೆ. ನಟ ದರ್ಶನ್ ಅವರು ನ್ಯಾಯಾಂಗ ಬಂಧನದಿಂದ ಬಿಡುಗಡೆಯಾಗಲಿ ಎಂದು ಪ್ರಾರ್ಥಿಸಿದ್ದೇನೆಂದರು. ನಟಿ ಹಾಗು ಪತ್ನಿ ಸೋನಾಲ್ ಮಂಥೆರೊ ಇದ್ದರು.