ಹಾಸನ: ಇಂದು ಹಾಸನಾಂಬ ದೇವಿ ದರ್ಶನ ಪಡೆದು ದೇವೇಗೌಡರು, ಚೆನ್ನಮ್ಮನವರಿಗೆ ಆಶೀರ್ವಾದ ಬೇಡಿದ್ದೇನೆ. ರಾಜ್ಯದಲ್ಲಿ ಮಳೆಯಿಂದ ಹಲವಾರು ಜಿಲ್ಲೆಗಳಲ್ಲಿ ರೈತರಿಗೆ ಬೆಳೆ ನಾಶವಾಗಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಕೂಡಲೇ ಸರ್ಕಾರ ಅದನ್ನು ಬಗೆಹರಿಸಬೇಕೆಂದು ತಾಯಿಯಲ್ಲಿ ಕೇಳಿದ್ದೇನೆ ಎಂದು ಶಾಸಕರಾದ ಎಚ್.ಡಿ.ರೇವಣ್ಣ ಹೇಳಿದರು.
ಗುರುವಾರ ಬೆಳಗ್ಗೆ ಪತ್ನಿ ಭವಾನಿ ರೇವಣ್ಣ ಸಮೇತರಾಗಿ ಹಾಸನಾಂಬ ದೇವಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವರ ಮೇಲೆ ನಂಬಿಕೆ ಇದೆ. ನ್ಯಾಯಾಲಯದ ಮೇಲೆ ನಂಬಿಕೆ ಇದೆ. ಕಳೆದ ಶನಿವಾರವೇ ದೇವಿ ದರ್ಶನ ಮಾಡಬೇಕಿತ್ತು. ಆದರೆ, ಬಚ್ಚಲು ಮನೆಯಲ್ಲಿ ಬಿದ್ದ ಕಾರಣ ನನ್ನ ಮೂಳೆ ಫ್ಯಾಕ್ಚರ್ ಆಗಿತ್ತು. ಆ ತಾಯಿ ಅನುಗ್ರಹದಿಂದ ಇಂದು ಬಂದು ದರ್ಶನ ಮಾಡಿದ್ದೇನೆ. ಪ್ರತಿವರ್ಷ ಬಂದು ದೇವಿ ದರ್ಶನ ಪಡೆಯುತ್ತೇನೆ ಎಂದರು
ಈ ಜಿಲ್ಲೆಯ ಜನತೆ ದೇವೇಗೌಡರಿಗೆ ಮತ್ತು ಅವರ ಕುಟುಂಬಕ್ಕೆ ರಾಜಕೀಯವಾಗಿ ಎಲ ್ಲರೀತಿಯ ಶಕ್ತಿ ಕೊಟ್ಟಿದ್ದಾರೆ. ಅದಕ್ಕೆ ಋಣಿಯಾಗಿದ್ದೇನೆ. ಈ ಜಿಲ್ಲೆಯ ಕೆಲಸವನ್ನು ಕೈಲಾದಷ್ಟು ಮಾಡುತ್ತೇನೆ. ಭವಾನಿಯವರು ಸಹ ಬಂದು ದರ್ಶನ ಪಡೆದಿದ್ದಾರೆ. ವಿಶೇಷವಾಗಿ ದೇವಿಯಲ್ಲಿ ನನ್ನ ಮಕ್ಕಳಾದ ಪ್ರಜ್ವಲ್ ಹಾಗೂ ಸೂರಜ್‌ನನ್ನು ಸಂಕಷ್ಟದಿಂದ ಪಾರು ಮಾಡು ಅಂತ ಕೇಳಿದ್ದೇನೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ವಿರುದ್ಧ ಹರಿಹಾಯ್ದ ರೇವಣ್ಣ
ನಾವು ಯಾರು ಪಾಸುಗಳನ್ನು ಮಾಡಿಸಿ ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿಲ್ಲ. ನಾವೇನಾದರೂ ಪಾಸು ಕೊಡಿ ಅಂತ ಕೇಳಿದ್ವಾ. ಯಾರನ್ನು ಕೇಳಿ ಪಾಸು ಮಾಡಿದ್ದಾರೆ. ನನಗೆ 100 ವಿವಿಐಪಿ ಪಾಸುಗಳನ್ನು ಕೊಟ್ಟಿದ್ದರು. ನಾನು ಅವುಗಳನ್ನು ನಮ್ಮ ತೋಟದಲ್ಲಿ ಕೆಲಸ ಮಾಡುವವರಿಗೆ ಕೊಟ್ಟಿದ್ದೆ. ಅವರು ಬಂದು ಆರು ಗಂಟೆ ಕಾದರು ದರ್ಶನ ಸಿಗಲಿಲ್ಲ. ಆದರೆ ಜಿಲ್ಲಾಧಿಕಾರಿ ನಾಲ್ಕು ಜೀಪ್‌ನಲ್ಲಿ ಐಬಿಯಿಂದ ಕರೆದುಕೊಂಡು ಬರುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ವಿರುದ್ಧ ಹರಿಹಾಯ್ದರು.
ಒಬ್ಬ ಪೊಲೀಸ್ ಅಧಿಕಾರಿಗೆ ಈ ಹಾಸನಾಂಬ ನನ್ನದು. ನನ್ನ ಕೇಳದೆ ಯಾರನ್ನು ಒಳಗಡೆ ಬಿಡಬಾರದು ಅಂತ ಡಿಸಿ ಹೇಳಿದ್ದಾರೆ. ಶಾಸಕ ಹುಲ್ಲಹಳ್ಳಿ ಸುರೇಶ್, ಯಾವ ಶಾಸಕರಿಗೂ ಬೆಲೆ ಇಲ್ಲ. ಜಿಲ್ಲಾಧಿಕಾರಿಗಳು ಹಾಸನಾಂಬೆ ಅವ್ಯವಸ್ಥೆ ಮಾಡಿದ್ದಾರೆ. ಅದರ ಬಗ್ಗೆ ತನಿಖೆ ಮಾಡಬೇಕು. ವಿಶೇಷ ಪಾಸ್ ಅಂತ ಕೊಟ್ಟು ಎಂಎಲ್‌ಎಗಳ ಗೌರವವನ್ನು ಗಾಳಿಗೆ ತೂರಿದ್ದಾರೆ. ನಾನು ಅದಕ್ಕಾಗಿ 1000 ರೂ.ಗಳ ಎರಡು ಪಾಸ್ ಖರೀದಿಸಿ ಬಂದಿದ್ದೇನೆ. ದೇವಸ್ಥಾನ ಆ ಯಮ್ಮನದ್ದಲ್ವಾ. ಪಾಸ್‌ಗಳನ್ನು ಮಾಡಲು ಯಾರು ಅಧಿಕಾರ ಕೊಟ್ಟರು ಎಂದು ಪ್ರಶ್ನೆ ಮಾಡಿದರು.
ದಿನಕ್ಕೆ ಎಷ್ಟು ಪ್ರೋಟೋಕಾಲ್ ವಾಹನ ಬಿಟ್ಟಿದ್ದಾರೆ. ಯಾರನ್ನು ಪ್ರೋಟೋಕಾಲ್ ಎಂದು ತೀರ್ಮಾನ ಮಾಡಿದ್ದೀರಿ. ನಾವೆಲ್ಲ ಹೆದರಿ ಓಡಿ ಹೋಗುತ್ತೇವೆ ಎಂದು ಡಿಸಿ ತಿಳಿದುಕೊಂಡಿದ್ದಾರೆ. ನನ್ನ ಜೀವನದಲ್ಲಿ ಇಂತಹ ಡಿಸಿಗಳನ್ನು ತುಂಬಾ ಜನರನ್ನು ನೋಡಿದ್ದೇನೆ. ನಂದು ದೇವಸ್ಥಾನ, ಅಪ್ಪಣೆ ಇಲ್ಲದೆ ಬರುವ ಆಗಿಲ್ಲ ಎಂದರೆ ನಾನೇಕೆ ಬರಲಿ. ಅದಕ್ಕೆ ಟಿಕೆಟ್ ತೆಗೆದುಕೊಂಡು ಬಂದಿದ್ದೇನೆ. ನಾನು ಶಾಸಕ, ಮಾಜಿ ಸಚಿವ ಎಂದು ಬಂದಿಲ್ಲ. ಭಕ್ತನಾಗಿ ಹಾಸನಾಂಬೆ ತಾಯಿ ಪೂಜೆಗಾಗಿ ಬಂದಿದ್ದೇನೆ ಎಂದು ಹೇಳಿದರು.
ಈ ಜಿಲ್ಲೆಯಲ್ಲಿ ನಡೆಸುತ್ತಿರುವ ದರ್ಬಾರ್ ಬಗ್ಗೆ ಸಮಗ್ರವಾಗಿ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯುತ್ತೇನೆ. ದೇವೇಗೌಡರು ನಲವತ್ತು ವರ್ಷ ರಾಜಕಾರಣ ಮಾಡಿರುವ ಜಿಲ್ಲೆ ಇದು. ಈಗ ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ. 2.5 ಲಕ್ಷ ವಿವಿಐಪಿ ಪಾಸ್‌ಗಳನ್ನು ಯಾರನ್ನು ಕೇಳಿ ಪ್ರಿಂಟ್ ಮಾಡಿಸಿದ್ದಿರಿ. ಸ್ಥಳೀಯ ಶಾಸಕರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಿರಾ? ಸ್ಥಳಿಯ ಶಾಸಕರುಗಳು ಎರಡೆರಡು ಕಿಲೋಮೀಟರ್ ನಡೆಯುವಂತೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿಖಿಲ್ ಗೆಲುವು ಪಕ್ಕಾ
ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ನೂರಕ್ಕೆ ನೂರು ಗೆಲ್ಲುತ್ತಾರೆ. ನಿಖಿಲ್ ಅವರ ಹೆಸರಿನಲ್ಲಿ ಅರ್ಚನೆ ಮಾಡಿಸಿದ್ದೇನೆ. ಯಾರೇ ಹೋಗಿ ಪ್ರಚಾರ ಮಾಡಿದರೂ ಗೆಲ್ಲುತ್ತಾರೆ. ಆ ಜಿಲ್ಲೆಗೆ ಕುಮಾರಸ್ವಾಮಿ ಕೊಡುಗೆ ಇದೆ. ರಾಮನಗರ ಜಿಲ್ಲಾ ಕೇಂದ್ರ ಮಾಡಿದ್ದು ಯಾರು? 2018ರಲ್ಲಿ 450 ಕೋಟಿ ರೂ. ವೆಚ್ಚದಲ್ಲಿ ಎಲ್ಲ ಕಡೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದು ಯಾರು? 120 ಕೋಟಿ ರೂ. ವೆಚ್ಚದಲ್ಲಿ ಇಂಜಿನಿಯರಿಂಗ್ ಕಾಲೇಜು ಮಾಡಿದ್ದು ಯಾರು? ಚನ್ನಪಟ್ಟಣಕ್ಕೆ ಯಾರು ಏನು ಮಾಡಿದ್ದಾರೆ ಎಂಬ ವಿಷಯದ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡೋಣ ಎಂದು ಸವಾಲು ಹಾಕಿದರು.
ಈ ಸಂದರ್ಭದಲ್ಲಿ ಶಾಸಕ ಸ್ವರೂಪ್ ಪ್ರಕಾಶ್ ಹಾಜರಿದ್ದರು.