ಹಾಸನ: ಹಾಸನಾಂಬ ದೇವಿ ಉತ್ಸವವನ್ನು ಜಿಲ್ಲೆಯಲ್ಲಿ ಅಧಿಕಾರಿಗಳ ದಬ್ಬಳಿಕೆ ಮಾಡಿದ್ದಾರೆ ಎಂಬುವುದಕ್ಕೆ ಹಾಸನಾಂಬ ಉತ್ಸವವೇ ಸಾಕ್ಷಿ.ಈ ದುರಾಡಳಿತದ ಬಗ್ಗೆ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಬಿಜೆಪಿ ಮುಖಂಡ ದೇವರಾಜೇಗೌಡ ಒತ್ತಾಯಿಸಿದರು.
ಹಾಸನಾಂಬ ದೇವಿ ಉತ್ಸವವನ್ನು ಉಪ ಚುನಾವಣಾ ಪ್ರಚಾರಕ್ಕೆ ದುರ್ಬಳಕೆ ಮಾಡಿಕೊಂಡ ಸಚಿವ ಕೆ.ಎನ್.ರಾಜಣ್ಣ ಅವರು ನೈತಿಕ ಹೊಣೆಹೊತ್ತು ಜಿಲ್ಲಾ ಉಸ್ತುವಾರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.ೂಡಲೇ ಜಿಲ್ಲಾ ಉಸ್ತುವಾರಿಯಿಂದ ನಿರ್ಗಮಿಸದೆ ಪುನಃ ಜಿಲ್ಲೆಗೆ ಆಗಮಿಸಿದರೆ ಕಪ್ಪು ಬಣ್ಣ ಬಳಿಯಬೇಕಾಗುತ್ತದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ಹಾಸನಾಂಬ ಉತ್ಸವದ ಅವ್ಯವಸ್ಥೆಗೆ ಕಾರಣವಾದ ಸಚಿವ ಕೆ.ಎನ್.ರಾಜಣ್ಣ ಅವರು ಜನರ ಆಕ್ರೋಶ ಎದುರಿಸಲಾಗದೆ ದೇಗುಲದ ಬಾಗಿಲು ಮುಚ್ಚುವ ಕೊನೆಯ ದಿನ ಆಗಮಿಸಲಿಲ್ಲ. ಅದೇ ರೀತಿ ಮುಂದೆಯೂ ಜಿಲ್ಲೆಗೆ ಕಾಲಿಡಬಾರದು. ಅವರು ತನ್ನ ಬೇಳೆ ಬೇಯಿಸಿಕೊಳ್ಳಲು ತುಮಕೂರು ಜಿಲ್ಲೆಯ ಜನರಿಗೆ ಪಾಸ್ ಹಂಚಿ, ಅವರಿಗೆಲ್ಲ ಜಿಲ್ಲಾ ಪ್ರವಾಸಿ ಮಂದಿರದಲ್ಲಿ ವಿಶೇಷ ಆತಿಥ್ಯ, ವಸತಿ ಸೌಕರ್ಯ ಕಲ್ಪಿಸಿ ಶಿಷ್ಟಾಚಾರದ ಮೂಲಕ ಹಾಸನಾಂಬ ದರ್ಶನ ಮಾಡಿಸಿ, ಹಾರತುರಾಯಿಗಳನ್ನು ಹಾಕಿಸಿ ಸನ್ಮಾನ ಮಾಡಿ ಕಳುಹಿಸಿ ಕೊಟ್ಟಿದ್ದಾರೆ. ಕಾಂಗ್ರೆಸ್ ಎಜೆಂಟ್‌ಗಳಿಗೆಲ್ಲ 500 ಪಾಸ್‌ಗಳನ್ನು ನೀಡಿ ಅವ್ಯವಸ್ಥೆಗೆ ಕಾರಣವಾಗಿದ್ದಾರೆ. ಉಸ್ತುವಾರಿ ಸಚಿವರ ಅನುಪಸ್ಥಿತಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ಅವರು ಪ್ರಸ್ತುತ ಜಿಲ್ಲಾ ಪಂಚಾಯಿತಿ ಕೆಡಿಪಿ ಸದಸ್ಯರಾಗಿದ್ದರೂ ಏಕ್ ದಿನಕಾ ಸುಲ್ತಾನ್ ಎಂಬ ರೀತಿಯಲ್ಲಿ ಹಾಸನಾಂಬ ಉತ್ಸವದಲ್ಲಿ ನಡೆದುಕೊಂಡಿದ್ದಾರೆ ಎಂದು ದೂರಿದರು.
ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರು ಕೂಡ ಹಾಸನಾಂಬ ದರ್ಶನೋತ್ಸವನ್ನು ತನ್ನ ಸ್ವಾರ್ಥಕ್ಕೆ ದುರ್ಬಳಕೆ ಮಾಡಿಕೊಂಡಿದ್ದಾರೆ. ರಾಜಕಾರಣಿಗಳು ಹೇಗೆ ಜನರನ್ನು ತನ್ನತ್ತ ಸೆಳೆಯಲು ಚುನಾವಣಾ ಗಿಮಿಕ್ ಮಾಡುತ್ತಾರೆ ಅದೇ ರೀತಿ ಜಿಲ್ಲಾಧಿಕಾರಿ ಕೂಡ ಭವಿಷ್ಯದಲ್ಲಿ ಪದೋನ್ನತಿಗಾಗಿ ರಾಜಕಾರಣಿಗಳು, ಹಣವಂತರು, ನ್ಯಾಯಾಧೀಶರನ್ನು ಖುದ್ದು ಭೇಟಿ ಮಾಡಿ ಆಹ್ವಾನ ಪತ್ರಿಕೆ ನೀಡಿ ಅವರೆಲ್ಲ ಗಮನವನ್ನು ತನ್ನತ್ತ ಸೆಳೆದುಕೊಂಡಿದ್ದಾರೆ. ತಮಗೆ ಬೇಕಾದವರಿಗೆ ಬೇಕಾಬಿಟ್ಟಿ ಪಾಸ್‌ಗಳನ್ನು ಹಂಚಿಕೆ ಮಾಡಿದ್ದಾರೆ. ಕ್ರಿಮಿನಲ್ ಹಿನ್ನಲೆಯುಳ್ಳವರು, ಹಣವಂತರು, ತಮಗೆ ಬೇಕಾದವರಿಗೆಲ್ಲ ಶಿಷ್ಟಾಚಾರದ ಪ್ರಕಾರ ದೇಗುಲಕ್ಕೆ ನೇರವಾಗಿ ಕರೆತಂದು ದೇವಿ ದರ್ಶನ ಮಾಡಿಸಿದ್ದಾರೆ ಎಂದು ಆರೋಪಿಸಿದರು.