ಹಾಸನ: ವರ್ಷಕ್ಕೊಮ್ಮೆಯಷ್ಟೇ ದರ್ಶನಭಾಗ್ಯ ಕರುಣಿಸುವ ನಗರದ ಅಧಿದೇವತೆ ಹಾಸನಾಂಬೆ ದೇವಿಯ ಗರ್ಭಗುಡಿ ಬಾಗಿಲನ್ನು ಗುರುವಾರ ಮಧ್ಯಾಹ್ನ 12.12 ಕ್ಕೆ ಶಾಸ್ತ್ರೋಕ್ತವಾಗಿ ತೆರೆಯುವ ಮೂಲಕ ಈ ವರ್ಷದ ಹಾಸನಾಂಬ ದರ್ಶನೋತ್ಸವಕ್ಕೆ ವಿಧಿಬದ್ಧ ಚಾಲನೆ ನೀಡಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ, ಶಾಸಕ ಪ್ರೀತಂ ಗೌಡ, ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಜಿಪಂ ಸಿಇಒ ಕಾಂತರಾಜು, ದೇವಾಲಯದ ಆಡಳಿತಾಧಿಕಾರಿ ಬಿ.ಎ. ಜಗದೀಶ್, ನಗರಸಭೆ ಅಧ್ಯಕ್ಷ ಆರ್. ಮೋಹನ್, ತಹಸೀಲ್ದಾರ್ ನಟರಾಜ್ ಮತ್ತಿತರ ಗಣ್ಯರು ಸಮ್ಮುಖದಲ್ಲಿ ಗರ್ಭಗುಡಿಗೆ ವರ್ಷದ ಹಿಂದೆ ಹಾಕಲಾಗಿದ್ದ ಬೀಗಮುದ್ರೆ ತೆರೆಯಲಾಯಿತು.
ದೇವಾಲಯದ ಗರ್ಭಗುಡಿಯ ಬಾಗಿಲು ತೆರೆಯುವ ವೇಳೆಗೆ ಸರಿಯಾಗಿ ತಳವಾರ ವಂಶದ ನಂಜರಾಜ ಅರಸ್ ಅವರು ಬಾಗಿಲ ಎದುರು ನೆಡಲಾಗಿದ್ದ ಬಾಳೆ ಕಂದನ್ನು ಕಡಿದು ದೇವಿಯ ದೃಷ್ಟಿ ನಿವಾರಿಸಿದರು. ನಂತರ ಸಚಿವರು ಮತ್ತು ಗಣ್ಯರು ಅರ್ಚಕರೊಂದಿಗೆ ಗರ್ಭಗುಡಿಯ ಒಳಗೆ ಪ್ರವೇಶಿಸಿ ವರ್ಷದ ಹಿಂದೆ ಹಚ್ಟಿಟ್ಟ ದೀಪ ಉರಿಯುತ್ತಿರುವುದು, ಅಲಂಕರಿಸಿದ್ದ ಹೂವು ಬಾಡದೇ ಇರುವುದು ಮತ್ತು ಇಟ್ಟಿದ್ದ ನೈವೇದ್ಯ ಹಳಸದೇ ಇರುವ ಪವಾಡವನ್ನು ಕಂಡು ಪಾವನರಾದರು. ನಂತರ ಹಾಸನಾಂಬ ದೇವಿಗೆ ಮತ್ತು ಸಿದ್ದೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿದರು.
5 ಲಕ್ಷ ಭಕ್ತರ ನಿರೀಕ್ಷೆ:
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಗೋಪಾಲಯ್ಯ ಅವರು, ಜಿಲ್ಲಾಡಳಿತದ ವತಿಯಿಂದ ಈ ಬಾರಿ ಹಾಸನಾಂಬ ಜಾತ್ರಾ ಮಹೋತ್ಸವವನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗಿದೆ. ನಗರದಲ್ಲಿ ವಿಶೇಷ ವಿದ್ಯುತ್ ದೀಪಗಳ ಹಾಗೂ ಕಮಾನುಗಳ ಅಲಂಕಾರ ಮಾಡಲಾಗಿದೆ. ದೇವಸ್ಥಾನದಲ್ಲಿ ದರ್ಶನಕ್ಕೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿದೆ. ಭಕ್ತಾದಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ದರ್ಶನಕ್ಕೆ ಎಲ್ಲಾ ರೀತಿಯ ಸೌಲಭ್ಯ ಒದಗಿಸಲಾಗಿದೆ ಎಂದು ತಿಳಿಸಿದರು.
ದೇವಿಗೆ ವಿಶೇಷ ಪೂಜೆ ನೆರೆವೇರಿಸಿ ಜಿಲ್ಲೆಗೆ ಹಾಗೂ ನಾಡಿನ ಜನತೆಗೆ ಒಳಿತಾಗಲಿ ಎಂದು ಪ್ರಾರ್ಥಿಸಲಾಗಿದೆ. ಕಳೆದ ಎರಡು ವರ್ಷ ಕೊರೋನ ಹಾವಳಿಯಿಂದ ಸಾರ್ವಜನಿಕ ದರ್ಶನಕ್ಕೆ ಅವಕಾಶ ಇರಲಿಲ್ಲ, ಸರಳವಾಗಿ ಜಾತ್ರೆಯನ್ನು ಆಚರಿಸಲಾಗಿತ್ತು. ಆದರೆ ಈ ಬಾರಿ ನೆರೆ ಜಿಲ್ಲೆ ಹಾಗೂ ನೆರೆ ರಾಜ್ಯಗಳಿಂದ 5 ಲಕ್ಷಕ್ಕೂ ಹಚ್ಚಿನ ಭಕ್ತರು ಬರುವ ನಿರೀಕ್ಷೆ ಇದೆ. ಅದಕ್ಕೆ ತಕ್ಕಂತೆ ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿದೆ. ವಿಶೇಷಚೇತನರು, ಗರ್ಭಿಣಿಯರು ಮತ್ತು ವೃದ್ಧರಿಗೆ ವಿಶೇಷ ದರ್ಶನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದ ಹೇಳಿದರು.
ದೀಪ ಉರಿಯುತ್ತಿತ್ತು:
ಗರ್ಭಗುಡಿಯ ಬಾಗಿಲು ತೆರೆದಾಗ ದೇವರ ಮುಂದಿನ ದೀಪ ಬೆಳಗುತ್ತಿತ್ತು ಹಾಗೂ ಹೂವು ಸಹ ಬಾಡಿರಲಿಲ್ಲ. ಇದು ಹಾಸನಾಂಬ ದೇವಿಯ ಪವಾಡ. ಇಂತಹ ಶಕ್ತಿ ದೇವತೆಯ ದರ್ಶನ ಪಡೆಯಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸಹ ಆಹ್ವಾನಿಸಲಾಗುವುದು ಎಂದು ತಿಳಿಸಿದರು.
ವಸತಿ ಭರವಸೆ:
ವಿಜಯದಶಮಿ ದಿನ ಪ್ರತಿವರ್ಷ ಬನ್ನಿ ಮಂಟಪದಲ್ಲಿ ಬನ್ನಿ ಕಡಿಯುವ ಮತ್ತು ಹಾಸನಾಂಬ ದೇವಿ ಗರ್ಭಗುಡಿ ಬಾಗಿಲು ತೆರೆಯುವಾಗಿ ಬಾಳೆಕಂದು ಕಡೆಯುವ ತಳವಾರ ವಂಶದ ನಂಜರಾಜ್ ಅರಸು ಅವರಿಗೆ ವಸತಿ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಶಾಸಕರಿಗೆ ಜವಾಬ್ದಾರಿ ನೀಡಲಾಗಿದ್ದು, ಈ ಬಗ್ಗೆ ಕೆಲವು ದಿನಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ದಿನದ 24 ಗಂಟೆ ದರ್ಶನ ಪರಿಶೀಲನೆ:
ಶಾಸಕ ಪ್ರೀತಮ್ ಗೌಡ ಮಾತನಾಡಿ, ಪ್ರತಿ ಬಾರಿಯಂತೆ ಈ ಬಾರಿಯೂ ಹಾಸನಂಬ ದರ್ಶನ ಆಯೋಜನೆ ಮಾಡಲಾಗಿದ್ದು, ಮುಂದಿನ 14 ದಿನಗಳ ಕಾಲ ದರ್ಶನಕ್ಕೆ ಅವಕಾಶವಿದೆ. ಹಿಂದಿನ ಮೂರ್ನಾಲ್ಕು ವರ್ಷಗಳಿಗಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳ ಆಗಮನ ನಿರೀಕ್ಷೆಯಿದ್ದು ನಗರಸಭೆ ಮತ್ತು ಜಿಲ್ಲಾಡಳಿತ ಸಕಲ ವ್ಯವಸ್ಥೆ ಮಾಡಿದೆ. ಸದ್ಯಕ್ಕೆ ರಾತ್ರಿ ವೇಳೆ ಸಾರ್ವಜನಿ ದರ್ಶನ ಇರುವುದಿಲ್ಲ. ಆದರೆ ಭಕ್ತರ ಸಂಖ್ಯೆ ಹೆಚ್ಚಾದರೆ ದಿನದ 24 ಗಂಟೆಗಳ ಕಾಲವೂ ದೇವಿಯ ದರ್ಶನಕ್ಕೆ ಅವಕಾಶ ನೀಡುವ ಕುರಿತು ಅರ್ಚಕರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನಂಜರಾಜ ಅರಸು ಅವರಿಗೆ ನಿವೇಶನ ಒದಗಿಸುವ ನಿಟ್ಟಿನಲ್ಲಿ ಹುಡಾ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು. ಹಾಸನಾಂಬ ದೇವಾಲಯದ ಆವರಣದಲ್ಲಿ ಇರುವಂತಹ ಕುಟುಂಬಗಳಿಗೆ ಬದಲಿ ನಿವೇಶನ ಒದಗಿಸಿ ದೇವಸ್ಥಾನಕ್ಕೆ ಎಷ್ಟು ಪ್ರಮಾಣದ ಜಾಗವನ್ನು ಕೊಡುತ್ತಾರೆ ಎಂಬುದರ ಬಗ್ಗೆ ಮುಂದಿನ ಹದಿನೈದು ದಿನಗಳ ಒಳಗೆ ಮಾತುಕತೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಎಎಸ್ಪಿ ತಮ್ಮಯ್ಯ, ಮೈಸೂರು ಎಎಸ್ಪಿ ನಂದಿನಿ, ಡಿವೈಎಸ್‌ಪಿ ಉದಯ ಭಾಸ್ಕರ್, ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ ಮತ್ತಿತರರು ಉಪಸ್ಥಿತರಿದ್ದರು.