ಜಿಲ್ಲೆ

ಹಾಸನಾಂಬ ದರ್ಶನದ ಲಕ್ಷಾಂತರ ಪಾಸುಗಳು ಬೇಕಾಬಿಟ್ಟಿ ಹಂಚಿಕೆ

Hassan - Ramesh H R

ಹಾಸನ:ಹಾಸನಂಬ ಜಾತ್ರಾ ಮಹೋತ್ಸವಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನ ಕೈಗೊಂಡಿತ್ತು. ಅವರ ಸಿದ್ಧತೆಗೆ ವ್ಯಾಪಕ ಮೆಚ್ಚುಗೆಗೂ ವ್ಯಕ್ತವಾಗಿತ್ತು. ಆದರೆ ಲಕ್ಷಗಟ್ಟಲೇ ಪಾಸುಗಳನ್ನು ಬೇಕಾಬಿಟ್ಟಿ ಹಂಚಿಕೆ ಮಾಡಿರುವುದರಿಂದ ಆರು ದಿನಗಳಿಂದ ದೇವಿ ದರ್ಶನಕ್ಕೆ ಅಡಚಣೆ ಎದುರಾಗಿದೆ.

ಧರ್ಮದರ್ಶನ ಮತ್ತು ಒಂದು ಸಾವಿರ ರೂ. ಟಿಕೆಟ್ ಪಡೆದು ದರ್ಶನಕ್ಕೆ ಹೋಗುವಂತಹ ಭಕ್ತರಿಗಿಂತ ವಿವಿಐಪಿ ಮತ್ತು ವಿಐಪಿ ಪಾಸುಗಳನ್ನು ಪಡೆದು ದರ್ಶನಕ್ಕೆ ನಿಂತಿರುವವರ ಸಂಖ್ಯೆಯೇ ಹೆಚ್ಚಾಗಿದ್ದು, ಅವರು ಸಹ ಗಂಟೆಗಟ್ಟಲೇ ನಿಂತು ದರ್ಶನಕ್ಕೆ ಕಾಯಬೇಕಾಗಿದೆ. ಈ ವ್ಯವಸ್ಥೆಯಿಂದ ಇಡೀ ವ್ಯವಸ್ಥೆಗೆ ಸಂಪೂರ್ಣವಾಗಿ ಕೊಡಲಿ ಪೆಟ್ಟು ಬಿದ್ದಿದೆ. ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಪೊಲೀಸರು ಹರಸಹಾಸ ಪಡಬೇಕಾಗಿದೆ. ಪಾಸುಗಳನ್ನು ಹಂಚಿಕೆ ಮಾಡಿ ಈಗ ನಮ್ಮಗಳ ಮೇಲೆ ಹೆಚ್ಚಿನ ಹೊರೆ ಹಾಕಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಅಧಿಕಾರಿಗಳ ನಡುವೆ ಮುಸುಕಿನ ಗುದ್ದಾಟ

ಮಂಗಳವಾರ ಸಂಜೆ ಜಿಲ್ಲಾಧಿಕಾರಿ ಮತ್ತು ಪೊಲೀಸರ ನಡುವೆ ನಡೆದಂತಹ ಜಟಾಪಟಿಯಿಂದ ಬುಧವಾರ ದೇವಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಂತಹ ಪೊಲೀಸರು ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ. ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಕಡೆಯವರನ್ನು ನೇರವಾಗಿ ದರ್ಶನಕ್ಕೆ ಕರೆದೊಯ್ಯುತ್ತಿದ್ದರೆ ಪೊಲೀಸ್ ಸಿಬ್ಬಂದಿ ‘ನಾವೇನು ಬರಿ ಕೆಲಸ ಮಾಡಲು ಬಂದಿದ್ದೇವಾ? ನಮ್ಮ ಕುಟುಂಬಸ್ಥರನ್ನು ಬಿಡುತ್ತಿಲ್ಲ. ನಾವು ಕೂಡ ನೇರವಾಗಿ ಕರೆದುಕೊಂಡು ಹೋಗುತ್ತೇವೆ,’ ಎಂದು ಅವರು ಸಹ ನೇರವಾಗಿ ತಮ್ಮ ಕಡೆಯವರನ್ನು ದೇವಸ್ಥಾನಕ್ಕೆ ಕರೆದೊಯ್ಯುತ್ತಿದ್ದು ಇದು ಸಾಕಷ್ಟು ಅವ್ಯವಸ್ಥೆಗೆ ಕಾರಣವಾಗುತ್ತಿದೆ.

ಸ್ವರೂಪ್, ಶ್ರೇಯಸ್ ಪಟೇಲ್‌ಮೌನ

ಹಾಸನಂಬ ಜಾತ್ರಾ ಮಹೋತ್ಸವಕ್ಕೆ ಜಿಲ್ಲಾಡಳಿತ ಲಕ್ಷಗಟ್ಟಲೆ ಪಾಸುಗಳನ್ನು ಮಧುಗಿರಿ, ಚನ್ನಪಟ್ಟಣ ಸೇರಿದಂತೆ ಇಡೀ ತುಮಕೂರು ಜಿಲ್ಲೆ ಹಾಗೂ ಬೆಂಗಳೂರು ಬೇಕಾಬಿಟ್ಟು ಹಂಚಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದ್ದರೂ ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಹಾಗೂ ಜಿಲ್ಲೆಯ ಸಂಸದ ಶ್ರೇಯಸ್ ಪಟೇಲ್ ಏಕೆ ಮೌನ ವಹಿಸಿದ್ದಾರೆ? ಬೇರೆ ಬೇರೆ ಜಿಲ್ಲೆಗಳಿಂದ ಬಂದ ಭಕ್ತರು ಇಡೀ ಶಾಪ ಹಾಕಿ ಹೋಗುತ್ತಿದ್ದಾರೆ. ಆದರೂ ಇವರು ಯಾವುದೇ ರೀತಿ ಪ್ರತಿಕ್ರಿಯೆ ನೀಡದೆ ಮತ್ತು ವ್ಯವಸ್ಥೆಯನ್ನು ಸರಿಪಡಿಸಲು ಮುಂದಾಗದೆ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಶಾಸಕ ಎಚ್.ಪಿ. ಸ್ವರೂಪ್ ಅವರು ತಮ್ಮ ಕ್ಷೇತ್ರದಲ್ಲಿ ನಡೆಯುತ್ತಿರುವಂತಹ ಅತ್ಯಂತ ಬಹುದೊಡ್ಡ ಹಾಸನಾಂಬ ಜಾತ್ರಾ ಮಹೋತ್ಸವದ ಆಗು-ಹೋಗುಗಳ ಬಗ್ಗೆ ನಿಗಾ ವಹಿಸಬೇಕಾದ ಶಾಸಕರು ಗಮನ ಹರಿಸುತ್ತಿಲ್ಲ ಎಂಬುದರ ಬಗ್ಗೆ ಸಾಕಷ್ಟು ಆಕ್ರೋಶಗಳು ವ್ಯಕ್ತವಾಗುತ್ತಿವೆ. ಅದೇ ರೀತಿ ಸಂಸದ ಶ್ರೇಯಸ್ ಪಟೇಲ್ ಅವರು ಕೂಡ ಇಷ್ಟೆಲ್ಲ ಸಮಸ್ಯೆಗಳಾಗುತ್ತಿದ್ದರೂ ಕೂಡ ದೇವಸ್ಥಾನದ ಹತ್ತಿರ ಸುಳಿಯದೆ ನಿರ್ಲಕ್ಷೃ ವಹಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಅಣತಿಯಂತೆ ಇವರು ನಡೆದುಕೊಳ್ಳುತ್ತಿದ್ದಾರೆ ಎಂಬ ಅನುಮಾನ ಮೂಡುತ್ತಿದೆ.

ಭಕ್ತರ ನರಳಾಟ, ಸಿಬ್ಬಂದಿ ಒದ್ದಾಟ

ಹಾಸನಾಂಬ ದೇವಿಯ ದರ್ಶನಕ್ಕೆ ರಾಜ್ಯದ ನಾನಾ ಭಾಗದಿಂದ ಜನರು ಆಗಮಿಸುತ್ತಿದ್ದಾರೆ. ಆದರೆ ಅಲ್ಲಿ ಆಗುತ್ತಿರುವಂತಹ ಅವ್ಯವಸ್ಥೆಗಳು ಮತ್ತು ದಿನವಿಡೀ ಸಾಲಿನಲ್ಲಿ ನಿಲ್ಲಬೇಕಾದ ವ್ಯವಸ್ಥೆ ಬಗ್ಗೆ ಇಡೀ ಶಾಪ ಹಾಕುತ್ತಿದ್ದಾರೆ. ಹಲವರು ಅನಾರೋಗ್ಯದಿಂದ ನರಳಾಡುತ್ತಿದ್ದರೆ ಇನ್ನೂ ಕೆಲವರು ದರ್ಶನ ಮಾಡದೆ ದೇವಾಲಯದ ಮುಂಭಾಗವೇ ಕೈಮುಗಿದು ವಾಪಸ್ ಆಗುತ್ತಿದ್ದಾರೆ.

ದೇವಾಲಯಕ್ಕೆ ದಿನದಿಂದ ದಿನಕ್ಕೆ ಬರುವಂತಹ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು ಇದನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಗಿದೆ. ಪೊಲೀಸರು ಮತ್ತು ಕಂದಾಯ ಇಲಾಖೆಯ ಸಿಬ್ಬಂದಿ ಹಾಗೂ ಸ್ಕೌಟ್ಸ್ ಆ್ಯಂಡ್ ಗೈಡ್ ಮಕ್ಕಳು ಯಾವಾಗ ಈ ಜಾತ್ರಾ ಮಹೋತ್ಸವ ಮುಗಿಯುತ್ತದೆ ಎಂಬ ಕಾತುರದಲ್ಲಿದ್ದಾರೆ. ನಮಗೆ ಈ ಜಾತ್ರಾ ಮಹೋತ್ಸವದ ಕರ್ತವ್ಯ ಬಿಟ್ಟು ಬೇರೆ ಯಾವುದೇ ಕೆಲಸ ಕೊಟ್ಟಿದ್ದರೂ ಕೂಡ ನೆಮ್ಮದಿಯಾಗಿ ಮಾಡುತ್ತಿದ್ದೇವು. ಇಂತಹ ನರಕದ ಕೆಲಸಕ್ಕೆ ನಮ್ಮನ್ನು ತಳ್ಳಿದ್ದಾರೆ ಎಂದು ಸಿಬ್ಬಂದಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ತುಮಕೂರಿನಲ್ಲೇ ಜಾತ್ರೋತ್ಸವ ಮಾಡಲಿ

ಹಾಸನಾಂಬ ದೇವಿ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವ ಕೆ ಎನ್ ರಾಜಣ್ಣ ಅವರು ಪಾಸುಗಳನ್ನು ಬೇಕಾಬಿಟ್ಟಿ ತಮ್ಮ ಜಿಲ್ಲೆಗೆ ನೀರಿನ ಹೊಳೆಯಂತೆ ಹಂಚಿದ್ದಾರೆ. ಮುಂದಿನ ವರ್ಷದಿಂದ ಅವರದೇ ಜಿಲ್ಲೆಯಾದ ತುಮಕೂರಿನಲ್ಲೇ ಉತ್ಸವ ಮಾಡಿಕೊಳ್ಳಲಿ. ಆದರೆ ನೆಮ್ಮದಿಯಾಗಿ ಹಾಸನಂಬ ತಾಯಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಿ ಎಂದು ಸಾರ್ವಜನಿಕರು ಕೈ ಮುಗಿದು ದೇವಿಯಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರಲ್ಲದೆ.