ಹಾಸನ: ಹಾಸನದ ಅದಿದೇವತೆ ಹಾಸನಾಂಬೆ ದೇವಿಯ ಗರ್ಭಗುಡಿ ಬಾಗಿಲು ತೆಗೆಯಲು ಆ.24ರಂದು ತೆರೆಯಲಿದೆ. ದರ್ಶನದ ವೇಳೆ ಭಕ್ತರಿಗೆ ಯಾವುದೇ ಸಮಸ್ಯೆ ಆಗದಂತೆ ಜಿಲ್ಲಾಡಳಿತ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಸಕಲ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಹಾಸನಾಂಬೆ ದೇವಿಯ ಗರ್ಭಗುಡಿಯ ಬಾಗಿಲು ವರ್ಷಕ್ಕೆ ಒಂದು ಬಾರಿ ಮಾತ್ರ ತೆರೆಯಲಿದೆ. ಈ ವರ್ಷ ಅಕ್ಟೋಬರ್ 24ಕ್ಕೆ ಬಾಗಿಲು ತೆಗೆದು ನವೆಂಬರ್ 3ಕ್ಕೆ ಬಾಗಿಲು ಮುಚ್ಚಲಾಗುತ್ತದೆ. ಈ ನಿಟ್ಟಿನಲ್ಲಿ ಈಗಾಗಲೇ ಹಾಸನಾಂಬೆ ದೇವಸ್ಥಾನದ ಆವರಣದಲ್ಲಿ ಅಗತ್ಯ ಸಿದ್ಧತೆಗಳು ಭರದಿಂದ ಸಾಗುತ್ತಿವೆ.
ದೇವಾಲಯದ ಆವರಣದಲ್ಲಿರುವ ಶೌಚಾಲಯ ಇರುವುದಕ್ಕೆ ವಿರೋಧಗಳು ಕೇಳಿ ಬಂದ ಹಿನ್ನಲೆಯಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದೆ. ಇನ್ನು ಸುಣ್ಣ ಬಣ್ಣ ಹೊಡೆಯಲಾಗುತ್ತಿದೆ. ಹಾಸನ ನಗರದ ಮುಖ್ಯ ರಸ್ತೆಯ ಗುಂಡಿಗಳ ಮುಚ್ಚುವ ಕೆಲಸ ನಡೆಯುತ್ತಿದೆ. ಹಾಸನಾಂಬೆ ದೇವಾಲಯದ ಸುತ್ತ ಯುಜಿಡಿ, ವಿದ್ಯುತ್ ಕಂಬ ದುರಸ್ತಿ ಮಾಡಲಾಗುತ್ತಿದೆ. ಇನ್ನು ರಸ್ತೆ ಉದ್ದಲಕ್ಕೂ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗುತ್ತಿದೆ. ಹಾಸನಾಂಬೆ ದೇವಿಯ ಜಾತ್ರೋತ್ಸವವನ್ನು ವಿಜೃಂಭಣೆಯಿಂದ, ಅದ್ಧೂರಿಯಾಗಿ ನಡೆಸುವಂತೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಸೂಚನೆ ನೀಡಿದ್ದು, ಅದರಂತೆ ಹಾಸನ ನಗರವನ್ನು ಶೃಂಗಾರ ಮಾಡಲಾಗುತ್ತಿದೆ.